ADVERTISEMENT

ಹುಬ್ಬಳ್ಳಿ | ಶಾಲಾ ಗ್ರಂಥಾಲಯಗಳ ಬಲವರ್ಧನೆಗೆ ಒತ್ತು

ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ: ರಾಜ್ಯದಾದ್ಯಂತ 15,439 ಶಾಲೆಗಳ ಆಯ್ಕೆ

ಶಿವರಾಯ ಪೂಜಾರಿ
Published 10 ಸೆಪ್ಟೆಂಬರ್ 2024, 5:19 IST
Last Updated 10 ಸೆಪ್ಟೆಂಬರ್ 2024, 5:19 IST
   

ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಹಾಗೂ ಗ್ರಂಥಾಲಯಗಳ ಬಲವರ್ಧನೆಗೆ ಸಮಗ್ರ ಶಿಕ್ಷಣ ಕರ್ನಾಟಕವು ಸಮಗ್ರ ಶಿಕ್ಷಣ ಯೋಜನೆಯಡಿ ರಾಜ್ಯದ 15,439 ಸರ್ಕಾರಿ ಶಾಲೆಗಳಲ್ಲಿ ‘ಗ್ರಂಥಾಲಯ ಕಾರ್ಯಕ್ರಮ’ ಅನುಷ್ಠಾನಗೊಳಿಸಲು ಮುಂದಾಗಿದೆ.

ಸಮಗ್ರ ಶಿಕ್ಷಣ ಯೋಜನೆಯಡಿ ರಾಜ್ಯದ 13,548 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 1,178 ಸರ್ಕಾರಿ ಪ್ರೌಢಶಾಲೆ ಹಾಗೂ 713 ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗಳನ್ನು (11 ಮತ್ತು 12ನೇ ತರಗತಿ) ಆಯ್ಕೆ ಮಾಡಲಾಗಿದೆ. ಪುಸ್ತಕಗಳ ಖರೀದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ₹8.80 ಕೋಟಿ, ಸರ್ಕಾರಿ ಪ್ರೌಢಶಾಲೆಗಳಿಗೆ ₹1.76 ಕೋಟಿ  ಹಾಗೂ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗಳಿಗೆ ₹1.42 ಕೋಟಿ ಸೇರಿ ಒಟ್ಟು ₹11.99 ಕೋಟಿ ಅನುದಾನ ಬಿಡುಗಡೆ ಮಾಡಿದೆ. 

ಈ ಯೋಜನೆಯಡಿ ಆಯ್ಕೆಯಾದ ಶಾಲೆಗಳು ನೇರವಾಗಿ ಪುಸ್ತಕಗಳನ್ನು ಖರೀದಿಸುವಂತಿಲ್ಲ. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಂತಿಮಗೊಳಿಸಿದ ಪುಸ್ತಕಗಳ ಪಟ್ಟಿಯಲ್ಲಿ ಅಗತ್ಯವಿರುವ ಪುಸ್ತಕಗಳನ್ನು ಆಯಾ ಪ್ರಕಾಶಕರಿಂದ ಮಾತ್ರ ಖರೀದಿಸಬೇಕು. ಖರೀದಿಸಬೇಕಾದ ಪುಸ್ತಕಗಳ ಪಟ್ಟಿಯನ್ನು ಸಮಗ್ರ ಶಿಕ್ಷಣ ಇಲಾಖೆಯು ಸುತ್ತೋಲೆಯಲ್ಲಿ ತಿಳಿಸಿದೆ.

ADVERTISEMENT

ಗ್ರಂಥಾಲಯ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಅತೀ ಹೆಚ್ಚು (1,120) ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಹಾಸನ (916), ಚಿತ್ರದುರ್ಗ (877), ಮಂಡ್ಯ (802), ತುಮಕೂರು (750), ಮೈಸೂರು (718), ದಕ್ಷಿಣ ಕನ್ನಡ (691) ನಂತರದ ಸ್ಥಾನದಲ್ಲಿವೆ. ಚಾಮರಾಜನಗರ (140) ಜಿಲ್ಲೆಯ ಅತೀ ಕಡಿಮೆ ಶಾಲೆಗಳನ್ನು ಈ ಕಾರ್ಯಕ್ರಮಕ್ಕೆ ಪರಿಗಣಿಸಲಾಗಿದೆ.

‘ಧಾರವಾಡ ಜಿಲ್ಲೆಯಲ್ಲಿ 296 ಹಿರಿಯ ಪ್ರಾಥಮಿಕ ಶಾಲೆ ಮತ್ತು 33 ಪ್ರೌಢಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಹಿರಿಯ ಪ್ರಾಥಮಿಕ ಶಾಲೆಯೊಂದಕ್ಕೆ ₹15 ಸಾವಿರ ಹಾಗೂ ಪ್ರೌಢಶಾಲೆಗೆ ₹6,500 ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಉಪ ಯೋಜನಾಧಾರಿ ಎಸ್‌.ಎಂ. ಹುಡೇದಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಸಮಗ್ರ ಶಿಕ್ಷಣ ಕರ್ನಾಟಕವು ‘ಗ್ರಂಥಾಲಯ ಕಾರ್ಯಕ್ರಮ’ ಅನುಷ್ಠಾನ ಮಾಡಿದರೆ, ಶಾಲಾ ಶಿಕ್ಷಣ ಇಲಾಖೆ ಕೂಡ ‘ಓದುವ ಹವ್ಯಾಸ ಜ್ಞಾನದ ವಿಕಾಸ’ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಪ್ರತಿ ಶಾಲೆಯಲ್ಲೂ ಮಕ್ಕಳ ಸ್ನೇಹಿ ಗ್ರಂಥಾಲಯ ನಿರ್ಮಿಸಲು ಸೂಚಿಸಿದೆ.

ಪುಸ್ತಕ ಖರೀದಿಗೆ ಸಮಿತಿ ರಚನೆ

ಸಮಗ್ರ ಶಿಕ್ಷಣ ಯೋಜನೆಯಡಿ ‘ಗ್ರಂಥಾಲಯ ಕಾರ್ಯಕ್ರಮ’ಕ್ಕೆ ಆಯ್ಕೆಯಾದ ಶಾಲೆಗಳಿಗೆ ಪುಸ್ತಕಗಳ ಖರೀದಿಗಾಗಿ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ರಚಿಸಿದೆ.

ಸಮಿತಿಯು ವರ್ಗಕ್ಕೆ ಅನುಗುಣವಾಗಿ ಪುಸ್ತಕಗಳನ್ನು ವರ್ಗೀಕರಿಸಿದೆ. ಕಾಲ್ಪನಿಕ, ವಾಸ್ತವಿಕ, ಜಾನಪದ, ಕವನ, ಕಾದಂಬರಿ, ನಾಟಕ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವ್ಯಾಕರಣ, ಗಣಿತ ಸೂತ್ರಗಳು, ಕಂಪ್ಯೂಟರ್.. ಹೀಗೆ ಈ ಎಲ್ಲ ಪ್ರಕಾರಗಳ ಪುಸ್ತಕಗಳನ್ನು ಖರೀದಿಸಬೇಕು. ಶಾಲೆಗಳಲ್ಲಿ ಅಷ್ಟೇ ಅಲ್ಲದೆ, ಮನೆಯಲ್ಲಿಯೂ ಓದಲು ಈ ಪುಸ್ತಕಗಳನ್ನು ನೀಡಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.