ADVERTISEMENT

ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರಿಂದ ಜೀವ ಬೆದರಿಕೆ: ಪುಟ್ಟಸಿದ್ದಶೆಟ್ಟಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 8:59 IST
Last Updated 13 ಅಕ್ಟೋಬರ್ 2022, 8:59 IST

ಹುಬ್ಬಳ್ಳಿ: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಬಾರುದು ಎಂದು ಹೇಳಿಕೆ‌ ನೀಡಿದ್ದಕ್ಕಾಗಿ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರು ನನಗೆ ಹಾಗೂ ಆಪ್ತರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ಕಾಯಕ ಸಮಾಜಗಳ ಒಕ್ಕೂಟವು ಅತಿ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ ಹಾಗೂ ಅವರ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದೆ. ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ಧವಲ್ಲ. ಆದರೆ, ಕೂಡಲ ಸಂಗಮ ಸ್ವಾಮೀಜಿ ಭಕ್ತರು, ವೈಯಕ್ತಿಕವಾಗಿ ಪರಿಗಣಿಸಿ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಯಕ ಸಮಾಜಕ್ಕಿರುವ ಶೇ 15ರಷ್ಟು ಮೀಸಲಾತಿ ಉಳಿವಿನ ಕುರಿತು ಮಾತನಾಡಿದ್ದೇನೆ. ನಾನು ಆಡಿದ ಮಾತುಗಳು ಪಂಚಮಸಾಲಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ಸಮುದಾಯವಾದ ನಮ್ಮ ಮೇಲೆ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಪಂಚಮಸಾಲಿ ಸಮಾಜದ ಸ್ವಾಮೀಜಿ ಹಾಗೂ ಅವರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಬಹಿರಂಗ ಕ್ಷಮೆ ಕೋರುತ್ತೆನೆ ಎಂದು ಹೇಳಿದರು.

ಮುಖಂಡರಾದ‌ ಶಿವಪುತ್ರಪ್ಪ ಇಟಗಿ, ನಾರಾಯಣ ಚಿಕ್ಕೋಡಿ, ಎ.ಪಿ.ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.