ಹುಬ್ಬಳ್ಳಿ: ‘ಕೃತಕ ಕೈ–ಕಾಲುಗಳನ್ನು ಜೋಡಿಸುತ್ತಾಅಂಗವಿಕಲರಿಗೆ ಆಸರೆಯಾಗಿರುವ ಮಹಾವೀರ ಲಿಂಬ್ ಸೆಂಟರ್, ಅವರು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿದೆ’ ಎಂದು ಸೆಂಟರ್‌ನ ಅಧ್ಯಕ್ಷ ಮಹೇಂದ್ರ ಸಿಂಘಿ ಹೇಳಿದರು.
ಇನ್ನರ್ ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಮತ್ತು ಸೆಂಟರ್ ಸಹಯೋಗದಲ್ಲಿ ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಇನ್ಫೊಸಿಸ್ ಧರ್ಮಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃತಕ ಕಾಲು ಜೋಡಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ಲಬ್‌ನವರು ತಮ್ಮ ಸಂಸ್ಥಾಪಕರ ದಿನವನ್ನು ಅಶಕ್ತರಿಗೆ ಕೃತಕ ಕಾಲುಗಳನ್ನು ಜೋಡಣೆ ಮಾಡುವ ಸಾರ್ಥಕ ಕಾರ್ಯದೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ. ಸೆಂಟರ್‌ನಿಂದ ಇದುವರೆಗೆ 45 ಸಾವಿರ ಮಂದಿಗೆ ಕೃತಕ ಕಾಲುಗಳನ್ನು ಜೋಡಿಸಲಾಗಿದೆ. ಕರ್ನಾಟಕವಷ್ಟೇ ಅಲ್ಲದೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ’ ಎಂದರು.
‘ಸೆಂಟರ್ ಸ್ಥಾಪನೆಯಿಂದ ಅಂಗವಿಕಲರು ಕೃತಕ ಕಾಲು ಜೋಡಣೆಗಾಗಿ ದೂರದ ಜೈಪುರಕ್ಕೆ ಹೋಗುವುದು ತಪ್ಪಿದೆ. ದಾನಿಗಳ ನೆರವಿನಿಂದ ಉಚಿತವಾಗಿ ಹುಬ್ಬಳ್ಳಿಯಲ್ಲೇ ಕಾಲುಗಳನ್ನು ಜೋಡಿಸಲಾಗುತ್ತಿದೆ. ಸೆಂಟರ್‌ನ ನಿಸ್ವಾರ್ಥ ಸೇವಾಕಾರ್ಯಗಳಿಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಕ್ಲಬ್‌ಗಳು ಕೈ ಜೋಡಿಸುತ್ತಾ ಬಂದಿವೆ’ ಎಂದು ನೆನೆದರು.
ಕ್ಲಬ್ ಕಾರ್ಯದರ್ಶಿ ಶಿಲ್ಪಾ ಶೆಟ್ಟಿ ಮಾತನಾಡಿ, ‘ಐವತ್ತು ಮಂದಿಗೆ ಕೃತಕ ಕಾಲುಗಳ ಜೋಡಣೆ ಶಿಬಿರದೊಂದಿಗೆ ಕ್ಲಬ್‌ನ 34ನೇ ವರ್ಷದ ಸಂಸ್ಥಾಪಕರ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದೇವೆ. ಇದು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ಬದುಕಿನ ಅವಿಸ್ಮರಣೀಯ ಕ್ಷಣವಾಗಿದೆ’ ಎಂದು ಹೇಳಿದರು.
ಕ್ಲಬ್ ಅಧ್ಯಕ್ಷೆ ಮಾಯಾ ಹೆಗಡೆ ಮಾತನಾಡಿದರು. ಪ್ರತಿಭಾ ರಾವ್ ಅವರು, ಕ್ಲಬ್‌ನ ಸೇವಾ ಚಟುವಟಿಕೆಗಳು ಮತ್ತು ಸಾಧನೆಗಳನ್ನು ವಿವರಿಸಿದರು. ಫಲಾನುಭವಿಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು. ಬೆಳಗಾವಿ, ಬೆಂಗಳೂರು, ಕೊಪ್ಪಳ, ರಾಯಚೂರು, ಶಿರಸಿ, ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಂಗವಿಕಲರಿಗೆ ಕೃತಕ ಕಾಲುಗಳನ್ನು ಜೋಡಿಸಲಾಯಿತು.
ಕ್ಲಬ್‌ನ ಮಾಜಿ ಗವರ್ನರ್‌ಗಳು, ಪದಾಧಿಕಾರಿಗಳು, ಸದಸ್ಯರು, ಲಿಂಬ್ ಸೆಂಟರ್ ಚೇರ್ಮನ್ ಗೌತಮ ಗುಲೇಚ್ಛಾ, ಕಾರ್ಯದರ್ಶಿ ಪ್ರಕಾಶ ಕಟಾರಿಯಾ, ಟೆಕ್ನಿಷಿಯನ್‌ಗಳಾದ ಸುದರ್ಶನ್, ಸುಧಾಕರ, ಎಸ್ತರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.