ಧಾರವಾಡ: ‘ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಘೋಷಿಸುವಂತೆ ಕೈಗೊಂಡಿದ್ದ ಹೋರಾಟ ರಾಜಕೀಯ ಸ್ಥಿತ್ಯಂತರದಿಂದ ಸ್ಥಗಿತವಾಗಿತ್ತು. ಅದನ್ನು ಮತ್ತೆ ಮುಂದುವರಿಸುವ ಪ್ರಾಮಾಣಿಕ ಪ್ರಯತ್ನವನ್ನು ನೇತಾರರು ಮಾಡಬೇಕು’ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಚಿಂತನಾ ಸಭೆ ಹಾಗೂ ಶಿರಸಂಗಿ ಲಿಂಗರಾಜ ದೇಸಾಯಿ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನ ತಂದುಕೊಡಲು ಹೋರಾಟ ನಡೆದಿತ್ತು’ ಎಂದರು.
‘ಸರ್ಕಾರವು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರಷ್ಟೇ ಸಾಲದು, ಸಾಂಸ್ಕೃತಿಕ ನಾಯಕರ ತತ್ವಗಳನ್ನು ಪಠ್ಯಗಳಲ್ಲಿ ಅಳವಡಿಸಿ ಶಾಲಾ ಮಕ್ಕಳಿಗೆ ತಲುಪಿಸಬೇಕು. ಪ್ರತಿ ಜಿಲ್ಲೆಯಲ್ಲೂ ಬಸವ ಭವನ ನಿರ್ಮಿಸಬೇಕು. ಅಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮ ನಿರಂತರವಾಗಿ ನಡೆಸಲು ವ್ಯವಸ್ಥೆ ಮಾಡಬೇಕು’ ಎಂದರು.
ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಜಾತಿರಹಿತ ಲಿಂಗಾಯತ ಧರ್ಮವನ್ನು ಯಾರು ಬೇಕಾದರೂ ಸ್ವೀಕರಿಸಬಹುದು. ಬಸವ ತತ್ವ ಜಾಗತಿಕ ಧರ್ಮವಾಗಬೇಕು, ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕು’ ಎಂದರು.
‘ಸಮಾಜದ ಎಲ್ಲ ಪಂಗಡಗಳು ಒಗ್ಗೂಡಬೇಕು ಎಂಬುದು ವೀರಶೈವ ಮಹಾಸಭಾ ಉದ್ದೇಶ. ಧರ್ಮ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು, ಜಾತಿ ಕಾಲಂನಲ್ಲಿ ಅವರ ಜಾತಿ ನಮೂದಿಸಬೇಕು ಎಂದು ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಅಧಿವೇಶದಲ್ಲಿ ನಿರ್ಣಯಿಸಿದ್ದು ಸಂತಸದ ಸಂಗತಿ. ಕುಂಬಾರ, ಹೂಗಾರ ಮೊದಲಾದ ಎಲ್ಲ ಲಿಂಗಾಯತ ಸಣ್ಣ ಪಂಗಡಗಳು, ಉತ್ತರ, ಮಧ್ಯ, ದಕ್ಷಿಣ ಕರ್ನಾಟಕದ ಎಲ್ಲರೂ ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.