ಹುಬ್ಬಳ್ಳಿ: ಧಾರವಾಡ ಪೇಢೆ ರುಚಿ ದೇಶದಾದ್ಯಂತ ಮನೆಮಾತಾದಂತೆ, ಇಲ್ಲಿಂದ ದೆಹಲಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೂಡ ದೇಶದಾದ್ಯಂತ ಹೆಸರು ಮಾಡಿದವರಾಗಿದ್ದಾರೆ. ಇದುವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಆಯ್ಕೆಯಾದ ಐದು ಸಂಸದರ ಪೈಕಿ ಮೂವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ.
ದೇಶ ಸ್ವಾತಂತ್ರ್ಯಗೊಂಡ ನಂತರ ಲೋಕಸಭಾ ಕ್ಷೇತ್ರಗಳು ರಚನೆಯಾದಾಗ ಧಾರವಾಡ ಜಿಲ್ಲೆಯ ಪ್ರದೇಶಗಳನ್ನು ಒಳಗೊಂಡಂತೆ ಧಾರವಾಡ ಉತ್ತರ ಕ್ಷೇತ್ರ ರಚಿಸಲಾಗಿತ್ತು. ಧಾರವಾಡ ಗ್ರಾಮೀಣ, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಗದಗ, ನರಗುಂದ, ನವಲಗುಂದ ಈ ವ್ಯಾಪ್ತಿಯಲ್ಲಿದ್ದವು.
1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಪಿ.ಕರ್ಮಾಕರ ಜಯಗಳಿಸಿದ್ದರು. ವಾಣಿಜ್ಯ ಖಾತೆಯ ಉಪ ಸಚಿವರಾಗಿದ್ದರು. ಇದಲ್ಲದೇ, ಉಪ ವ್ಯಾಪಾರ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದ್ದರು. ನಂತರ ಅವರು ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. 1957ರ ಚುನಾವಣೆಯಲ್ಲಿ ಜಯಗಳಿಸಿದ ನಂತರ ಅವರಿಗೆ ಆರೋಗ್ಯ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದರು. 1962ರಲ್ಲಿ ಅವರ ಲೋಕಸಭಾ ಸದಸ್ಯತ್ವ ಅವಧಿ ಮುಗಿದ ನಂತರ ರಾಜ್ಯಸಭೆಗೆ ನೇಮಕ ಮಾಡಲಾಯಿತು.
ಸರೋಜಿನಿ ಮಹಿಷಿ ಅವರನ್ನು ಕಾಂಗ್ರೆಸ್ 1962ರಲ್ಲಿ ಕಣಕ್ಕಿಳಿಸಿತು. ಇವರು ರಾಜ್ಯದ ಮೊದಲ ಸಂಸದೆಯಾಗಿ ಆಯ್ಕೆಯಾಗಿ, ಸಂಸತ್ತು ಪ್ರವೇಶಿಸಿದರು. 1967, 1971 ಹಾಗೂ 1977ರಲ್ಲಿ ಪುನಃ ಆಯ್ಕೆಯಾದರು. 1971ರಿಂದ 1974ವರೆಗೆ ಪ್ರವಾಸೋದ್ಯಮ ರಾಜ್ಯ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1974ರಿಂದ ಎರಡು ವರ್ಷಗಳ ಕಾಲ ಕಾನೂನು ಹಾಗೂ ನ್ಯಾಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು.
ಹಾಲಿ ಸಂಸದರಾಗಿರುವ ಪ್ರಲ್ಹಾದ ಜೋಶಿ 2004ರಲ್ಲಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದರು. 2009ರಲ್ಲಿ ಧಾರವಾಡ ಕ್ಷೇತ್ರ ಪುನರ್‌ವಿಂಗಡಣೆಯಾಗಿ, ಧಾರವಾಡ ಕ್ಷೇತ್ರವಾಗಿ ರೂಪುಗೊಂಡಿತು. ಇದಾದ ನಂತರವೂ ಅವರು ಗೆಲುವಿನ ಓಟ ಮುಂದುವರಿದಿದೆ. 2009, 2014 ಹಾಗೂ 2019ರಲ್ಲಿ ಸಂಸದರಾಗಿ ಆಯ್ಕೆಯಾದರು.
ನರೇಂದ್ರ ಮೋದಿ ಅವರ 2.0 ಸಚಿವ ಸಂಪುಟದಲ್ಲಿ ಜೋಶಿ ಅವರು ಗಣಿ ಮತ್ತು ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಪೂರ್ಣಾವಧಿಯವರೆಗೆ ಗಣಿ ಮತ್ತು ಕಲ್ಲಿದ್ದಲು ಖಾತೆಯನ್ನು ಜೋಶಿ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.