ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಫಕೀರ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ನಗರದಲ್ಲಿ ಸೋಮವಾರ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಮಾರಕವಾಗಿದ್ದ 3 ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರು. ರೈತರು ಸಾಕಷ್ಟು ಹೋರಾಟ ನಡೆಸಿದ ನಂತರ, ಸಾವು, ನೋವು ಸಂಭವಿಸಿದ ನಂತರ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಹಿಂದಕ್ಕೆ ಸರಿದಿದೆ. ರೈತರಿಗೆ ಪ್ರಯೋಜನವಾಗುವಂತಹ ಯಾವುದೇ ಯೋಜನೆಗಳನ್ನು ಅವರು ಪ್ರಕಟಿಸಿಲ್ಲ. ರೈತರ ಪಾಲಿಗೆ ಬಿಜೆಪಿ ಮಾರಕವಾಗಿದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ರೈತರಿಗೆ ಪ್ರಯೋಜನವಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 3 ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ರೈತರಿಗೆ ಮೋಸ ಮಾಡಿವೆ. ಅದಕ್ಕಾಗಿ ಪರ್ಯಾಯ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
ಜನರ ಹಿತದೃಷ್ಟಿಯಿಂದ ಸ್ಪರ್ಧೆ: ‘ಈ ಚುನಾವಣೆ ಕೇವಲ ಚುನಾವಣೆಯಲ್ಲ. ಇದೊಂದು ರೀತಿಯ ಧರ್ಮ ಯುದ್ಧವಾಗಿದೆ. ಕ್ಷೇತ್ರದ ಮತದಾರರು ಹಣ, ಆಮಿಷಗಳಿಗೆ ಮತ ಮಾರಿಕೊಳ್ಳದೇ ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
‘ಈ ಭಾಗದ ಹಲವು ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿದ್ದರು. ಈ ಸಮಸ್ಯೆಗಳನ್ನು ಬಗೆಹರಿಸಲು ಒಬ್ಬ ಅರ್ಹ ಸಂಸದ ಆಯ್ಕೆಯಾಗುವುದು ಅವಶ್ಯಕ ಇದೆ. ಅದಕ್ಕಾಗಿ ನಾವು ಜನರ ಹಿತದೃಷ್ಟಿಯಿಂದ ಸ್ಪರ್ಧಿಸುತ್ತಿದ್ದೇನೆ’ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಜಿಲ್ಲಾ ಉಪಾಧ್ಯಕ್ಷ ವೈ.ಎನ್. ಪಾಟೀಲ, ಸುರಭಿ, ಶಂಕ್ರಮ್ಮ ಸುತಾರ, ಶಿವಯೋಗಿ ಬ್ಯಾಡಗಿ, ಹುಲಿಗೆಮ್ಮ ನಾಯಕ, ರತ್ನಮ್ಮ, ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.
‘ಬಿಎಸ್‌ವೈ ಜತೆ ಚರ್ಚೆಗೆ ಹೋಗಲ್ಲ’
ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸುವ ನಮ್ಮ ನಿರ್ಧಾರ ಅಚಲವಾಗಿದೆ. ಹೀಗಾಗಿ ಯಾರ ಜೊತೆಗೂ ನಾವು ಚರ್ಚೆಗೆ ಹೋಗಲ್ಲ’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈಹಾಕಬಾರದೆಂದು ಮನವಿ ಮಾಡಿಕೊಳ್ಳುತ್ತೇನೆಂದು ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಯಾರ ಜೊತೆಗೂ ಚರ್ಚೆಗೆ ಹೋಗಲ್ಲ. ನಾವು ಮತದಾರರ ಬಳಿ ಹೋಗುತ್ತವೆ. ಮುಂದಿನ ದಿನಗಳಲ್ಲಿ ಅವರಿಗೆ ನಾವು ಯಾವ ಸಾಹಸ ಮಾಡುತ್ತಿದ್ದೇವೆ ಎಂಬುದು ತಿಳಿಯುತ್ತದೆ’ ಎಂದರು.
‘ನಾವು ಸ್ಪರ್ಧಿಸುವುದಾಗಿ ಹೇಳಿರುವುದನ್ನು ಕೇಳಿ ಈಗಾಗಲೇ ನೊಂದ ಸಮುದಾಯಗಳ ಮುಖಂಡರು ಖುಷಿಪಟ್ಟಿದ್ದಾರೆ. ಬೆಂಬಲವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸೋಲಿನ ಭಯ ಕಾಡಲಾರಂಭಿಸಿದೆ’ ಎಂದರು.
‘ಪ್ರಲ್ಹಾದ ಜೋಶಿ ಅವರ ಭಕ್ತರು ನಮ್ಮನ್ನು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಾವು ನಾಡಿನ ಹಿತಕ್ಕಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪೀಠದಲ್ಲಿಯೂ ಇರುತ್ತೇವೆ ಚುನಾವಣೆ ಕಣದಲ್ಲಿಯೂ ಇರುತ್ತೇವೆ’ ಎಂದು ಹೇಳಿದರು.
‘ಪ್ರತಿಸ್ಪರ್ಧಿ ಜೋಶಿ ಅವರಿಗೆ ಭಯ ಮೂಡಿದೆ. ಅದಕ್ಕಾಗಿ ಅವರು ನಾಮಪತ್ರ ಸಲ್ಲಿಸುವಾಗ ಅನೇಕರನ್ನು ಕರೆಯಿಸಿದ್ದಾರೆ. ಅವರನ್ನು ಕರೆಯಿಸಿದರೆ ಲಾಭವಾಗುತ್ತದೆ ಇವರನ್ನು ಕರೆಯಿಸಿದರೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಯಡಿಯೂರಪ್ಪ ಜಗದೀಶ ಶೆಟ್ಟರ್ ಯಾರೇ ಬಂದರೂ ಮತದಾರರ ಮೇಲೆ ಪ್ರಭಾವ ಉಂಟಾಗುವುದಿಲ್ಲ’ ಎಂದರು.
ಸೋಲಿನ ಭೀತಿಯಿಂದ ಅವರು ಎಲ್ಲ ಸಮುದಾಯಗಳ ಮುಖಂಡರ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮನೆ ಮಠಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಈಗ ಮಾಡುತ್ತಿರುವ ಕೆಲಸವನ್ನು ಮೊದಲೇ ಮಾಡಿದ್ದರೆ ನಾವು ರಾಜಕೀಯಕ್ಕೆ ಪ್ರವೇಶ ಮಾಡಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.