ADVERTISEMENT

ಹುಬ್ಬಳ್ಳಿ: ಜ.17ರಿಂದ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 16:25 IST
Last Updated 13 ಜನವರಿ 2024, 16:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹುಬ್ಬಳ್ಳಿ: ‘ಅಪಘಾತ ಮಾಡಿ ಪರಾರಿಯಾದ (ಹಿಟ್ ಆ್ಯಂಡ್ ರನ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಭಾರತೀಯ ನ್ಯಾಯ ಸಂಹಿತೆ (2ನೇ) –2023ರಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜ.17ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ ಧಾರವಾಡ ಗೂಡ್ಸ್ ಟ್ರಾನ್ಸ್‌ಪೋರ್ಟರ್ಸ್‌ ಆ್ಯಂಡ್ ಲಾರಿ ಓನರ್ಸ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘ, ತುಂಗಭದ್ರಾ ಮರಳು ಸಾಗಾಣಿಕೆದಾರ ಸಂಘ, ಧಾರವಾಡ ಲಾರಿ ಓನರ್ಸ್ ಆ್ಯಂಡ್ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ ಮತ್ತು ಬೆಂಗಳೂರಿನ ಕರ್ನಾಟಕ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಪ್ರಸ್ತಾಪಿತ ಕಾಯ್ದೆಯಲ್ಲಿ ಹಿಟ್ ಆ್ಯಂಡ್‌ ರನ್ ಪ್ರಕರಣದಲ್ಲಿ 10 ವರ್ಷ ಜೈಲು, ₹7 ಲಕ್ಷ ದಂಡ ವಿಧಿಸಬಹುದು. ಇದು ಅವೈಜ್ಞಾನಿಕ. ಇದನ್ನು ಜಾರಿಗೊಳಿಸಬಾರದು’ ಎಂದರು.

‘ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಅಂದು 20 ಸಾವಿರ ಲಾರಿಗಳು, ಮಿನಿ ಲಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ಕಾಯ್ದೆಯಲ್ಲಿನ ನ್ಯೂನತೆಗಳ ಬಗ್ಗೆ ಕರ ಪತ್ರ ಹಂಚಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

‘ಮೋಟಾರು ವಾಹನ ಕಾಯ್ದೆಯ 194 ಎ/1 ಅಡಿ ಹೈಟ್ ಆ್ಯಂಡ್ ಡೋರ್ ಓಪನ್‌ಗೆ ಸಂಬಂಧಿಸಿದಂತೆ ಇದ್ದ ದಂಡದ ಪ್ರಮಾಣವನ್ನು ₹500ರಿಂದ ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದು ಸರಿಯಲ್ಲ’ ಎಂದರು.

‘ಜಿಎಸ್‌ಟಿ ಬಿಲ್‌ನಲ್ಲಿ ವ್ಯಾಪಾರಿಗಳು ತಪ್ಪು ಮಾಡಿದರೂ ಲಾರಿಯನ್ನು ಜಪ್ತಿ ಮಾಡಲಾಗುತ್ತಿದೆ. ಇದರಿಂದ ಲಾರಿ ಮಾಲೀಕರಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು. 

ಸಂಘದ ಅಧ್ಯಕ್ಷ ವಾಸು ಕೋನರಡ್ಡಿ, ಪ್ರಕಾಶ ರಾಯ್ಕರ್, ಮಹಾವೀರ ಯರೇಶೀಮೆ, ಸಮೀರ್ ಪೀರಜಾದೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.