ADVERTISEMENT

ಧಾರವಾಡ | ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದ ಎಲ್‌ಪಿಜಿ ಟ್ಯಾಂಕರ್ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 6:49 IST
Last Updated 17 ಆಗಸ್ಟ್ 2023, 6:49 IST
   

ಧಾರವಾಡ: ನಗರದ ಹೈಕೋರ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್4) ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದ ಎಲ್‌ಪಿಜಿ ಟ್ಯಾಂಕರ್ ಅನ್ನು ಇಂದು ಹೊರ ತೆಗೆಯಲಾಗಿದೆ.

ಬುಧವಾರ ಟ್ಯಾಂಕರ್‌ ಮುಂಬೈಯಿಂದ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಬರುತಿತ್ತು. ಸರ್ವಿಸ್ ರಸ್ತೆಯಲ್ಲಿ ಸಾಗಲು ಪ್ರಯತ್ನಿಸಿ, ಟ್ಯಾಂಕರ್ ಅಂಡರ್‌ಪಾಸ್‌ನಲ್ಲಿ ಸಿಲುಕಿತ್ತು.

ಅಂಡರ್‌ಪಾಸ್‌ನ ಸೀಲಿಂಗ್‌ಗೆ ಟ್ಯಾಂಕರ್‌ನ ಮುಚ್ಚಳ ತಾಗಿ, ಅನಿಲ ಸೋರಿಕೆಯಾಗಿದ್ದರಿಂದ ಬುಧವಾರ ರಾತ್ರಿಯಿಡೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಳಗಾವಿ ಮತ್ತು ಧಾರವಾಡ ಕಡೆ ಸಾಗುವ ವಾಹನಗಳ ಸಂಚಾರವನ್ನು ಸಂಪೂರ್ಣ ತಡೆ ಹಿಡಿಯಲಾಗಿತ್ತು. ಘಟನಾ ಸ್ಥಳದಿಂದ ಸುಮಾರು 2 ಕಿ.ಮೀ.ವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದರು.

ADVERTISEMENT

ಎರಡು ಕಿ.ಮೀ.ಗಳಿಗೂ ಹಿಂದೆ ಇದ್ದ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಬೆಳಗಾವಿ ಸೇರಿದಂತೆ ವಿವಿಧ ಊರುಗಳಿಗೆ ವಾಹನ ಸವಾರರು ಅನ್ಯಮಾರ್ಗದಲ್ಲಿ ಸಂಚರಿಸಿದ್ದರು. ಸುಮಾರು 2 ಕಿ.ಮೀ.ವರೆಗೆ ವಾಹನಗಳ ಸಾಲು ಕಂಡು ಬಂದಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದೀಗ ಟ್ಯಾಂಕರ್‌ ಅನ್ನು ಹೊರಕ್ಕೆ ತೆಗೆಯಲಾಗಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.