ADVERTISEMENT

ರಾಜ್ಯದಲ್ಲಿ ಬಿಜೆಪಿ ಎರಡಂಕಿ ತಲುಪಲ್ಲ: ಸಚಿವ ದಿನೇಶ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:53 IST
Last Updated 5 ಮೇ 2024, 15:53 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಹುಬ್ಬಳ್ಳಿ: ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಚ್ಚರಿಯ ಫಲಿತಾಂಶ ಬರುವ ನಿರೀಕ್ಷೆ ಇದ್ದು, ಬಿಜೆಪಿಯವರು ಎರಂಡಕಿ ಮುಟ್ಟುವುದಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಸತ್ಯ ಮತ್ತು ಸುಳ್ಳು, ಪ್ರೀತಿ ಮತ್ತು ದ್ವೇಷದ ನಡುವಿನ ಚುನಾವಣೆ. ನಾವು ಜೋಡಿಸಲು ಹೊರಟರೆ ಬಿಜೆಪಿಯವರು ವಿಭಜಿಸಲು ನೋಡುತ್ತಾರೆ’ ಎಂದರು.

‘ಮೀಸಲಾತಿ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ಕಾಲದಿಂದಲೂ ಅವರು ಮೀಸಲಾತಿಯ ವಿರುದ್ಧ ಇದ್ದಾರೆ. ಮಂಡಲ್‌ ಆಯೋಗ ರಚನೆಯಾದಾಗಲೂ ಅದನ್ನು ಬಿಜೆಪಿ ವಿರೋಧಿಸಿತ್ತು’ ಎಂದರು.

ADVERTISEMENT

‘ಬಿಜೆಪಿ, ಆರ್‌ಎಸ್‌ಎಸ್‌ನ ಆಂತರಿಕ ನೀತಿ, ಸಿದ್ಧಾಂತ ಸಂವಿಧಾನ ಬದಲಾವಣೆ ಮಾಡುವುದೇ ಆಗಿದೆ. ಸಂವಿಧಾನ ಅವರಿಗೆ ನಿಜವಾಗಿಯೂ ಧರ್ಮಗ್ರಂಥವೇ ಆಗಿದ್ದರೆ ಜಾಹೀರಾತು ಕೊಡುವ ಅಗತ್ಯ ಇರಲಿಲ್ಲ. ಅವರ ಸಿದ್ಧಾಂತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ರಾಜ್ಯದ ಪರ ಕೆಲಸ ಮಾಡುವಂತಹ ಸಂಸದರು ನಮಗೆ ಬೇಕು. ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾದರೂ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಒಂದು ಬಾರಿಯೂ ಅವರು ಧ್ವನಿ ಎತ್ತಿಲ್ಲ’ ಎಂದು ಆರೋಪಿಸಿದರು.

‘ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡರು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅವರಿಗೆ ನ್ಯಾಯ ಕೊಡಲಿಸಲಿಲ್ಲ. ಆರೋಪಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಲಿಲ್ಲ’ ಎಂದು ಆರೋಪಿಸಿದರು.

‘ನರೇಂದ್ರ ಮೋದಿ ಅವರು ಇಡೀ ವಿಶ್ವವನ್ನು ಸುತ್ತುತ್ತಾರೆ. ಮಣಿಪುರದಲ್ಲಿ ಅಮಾನವೀಯ ಘಟನೆ ನಡೆದರೂ ಅಲ್ಲಿಗೆ ಭೇಟಿ ನೀಡಲಿಲ್ಲ. ಮಹಿಳಾ ಸುರಕ್ಷತೆ ಬಗ್ಗೆ ನಿಮ್ಮ ನಿಲುವು ಏನು’ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ ಅವರ ನೀತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ಕಡಿಮೆಯಾಗುತ್ತಿದೆ. ನೇಪಾಳ ಸೇರಿದಂತೆ ನೆರೆಯ ಯಾವ ರಾಷ್ಟ್ರಗಳ ಜತೆಗೂ ಉತ್ತಮ ಸಂಬಂಧ ಹೊಂದಿಲ್ಲ. ಇವರು ವಿಶ್ವಗುರುವಾಗಲು ಹೇಗೆ ಸಾಧ್ಯ? ಎಂದರು.

‘ಸಾಮಾಜಿಕ ನ್ಯಾಯ, ಪ್ರಜಾ‍ಪ್ರಭುತ್ವದ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ ಅನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಬೇಕು. ಸುಳ್ಳು ಹೇಳುವ ಬಿಜೆಪಿಯನ್ನು ಮನೆಗೆ ಕಳಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಅಲ್ತಾಫ್‌ ಹಳ್ಳೂರು, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ, ರಾಜೇಶ್ವರಿ ಪಾಟೀಲ, ಗಂಗಾಧರ ದೊಡ್ಡವಾಡ, ಮೋಹನ ಹಿರೇಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.