ADVERTISEMENT

ಧಾರವಾಡ ಲೋಕಸಭಾ | ಕೈಗಾರಿಕೆ ಸ್ಥಾಪನೆ, ಮಹದಾಯಿ ಅನುಷ್ಠಾನ ಗುರಿ: ವಿನೋದ ಅಸೂಟಿ

ಬಿ.ಜೆ.ಧನ್ಯಪ್ರಸಾದ್
Published 2 ಮೇ 2024, 3:25 IST
Last Updated 2 ಮೇ 2024, 3:25 IST
ವಿನೋದ ಕೆ ಅಸೂಟಿ
ವಿನೋದ ಕೆ ಅಸೂಟಿ   
ಕಾಂಗ್ರೆಸ್‌ ಪಕ್ಷವು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿನೋದ ಕೆ. ಅಸೂಟಿ ಅವರನ್ನು ಕಣಕ್ಕಿಳಿಸಿದೆ. ಯುವ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷರಾಗಿ ಎಂಟು ವರ್ಷಗಳಿಂದ ವಿನೋದ ಕಾರ್ಯನಿರ್ವಹಿಸುತ್ತಿದ್ದಾರೆ. 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಸೋತಿದ್ದರು. ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅವರು, ಚುನಾವಣೆ ತಯಾರಿ, ಕ್ಷೇತ್ರದಲ್ಲಿ ಚಟುವಟಿಕೆಗಳು ಇತ್ಯಾದಿ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದು ಯಾಕೆ?

ಜನರ ಸಂಕಷ್ಟಗಳಿಗೆ ಸ್ಪಂದಿಸಲು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದೇನೆ. ಜನರನ್ನು ಸುಲಭವಾಗಿ ತಲುಪಲು, ಸೇವೆ ಮಾಡಲು ಈ ಕ್ಷೇತ್ರದಲ್ಲಿ ಅವಕಾಶ ಇದೆ. ಅಧಿಕಾರ ಇದ್ದರೆ (ಜನಪ್ರತಿನಿಧಿಯಾದರೆ) ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ.

ಬಿಬಿಎ ವ್ಯಾಸಂಗ ಮಾಡಿದ್ದೀರಿ, ನಿರ್ವಹಣೆ, ಮಾರ್ಕೆಟಿಂಗ್‌ ಮೊದಲಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇತ್ತು. ಅಲ್ಲವೇ?

ADVERTISEMENT

ಬ್ಯುಸಿನೆಸ್‌ (ಟಿಪ್ಪರ್‌, ಜೆಸಿಬಿ, ಹಿಟಾಚಿ ಬಾಡಿಗೆ) ನಮ್ಮ ಕುಟುಂಬದ ಭಾಗ. ಈ ರಾಜಕೀಯ ಕ್ಷೇತ್ರದಲ್ಲೂ ಒಳ್ಳೆಯ ಕೆಲಸ, ಸಾಧನೆ ಮಾಡಲು ಅವಕಾಶ ಇವೆ. ಈ ಕ್ಷೇತ್ರದಲ್ಲಿ 24X7 ಕೆಲಸ ಮಾಡಬೇಕಾಗುತ್ತದೆ. ಬ್ಯುಸಿನೆಸ್‌ ಮತ್ತು ರಾಜಕೀಯ ಎರಡನ್ನೂ ನಿರ್ವಹಿಸುವೆ.

ಕುಟುಂಬ ರಾಜಕಾರಣದ ಬಗ್ಗೆ ಏನು ಹೇಳುತ್ತೀರಾ?

ನಮ್ಮ ಕುಟುಂಬದಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವುದು ನಾನೇ ಮೊದಲು. ಕುಟುಂಬ ರಾಜಕಾರಣದ ಹಿನ್ನೆಲೆ, ಯಾರ ಬೆಂಬಲ ಇಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಮೇಲೇರಿರುವವರು ಬಹಳಷ್ಟು ಮಂದಿ ಇದ್ದಾರೆ. ಹೊಸದಾಗಿ ಪ್ರವೇಶಿಸುವವರು ಶೂನ್ಯದಿಂದ ಕೆಲಸ ಆರಂಭಿಸಬೇಕಾಗುತ್ತದೆ, ಅಸ್ತಿತ್ವ ಕಂಡುಕೊಳ್ಳಲು ಕಷ್ಟಪಡಬೇಕಾಗುತ್ತದೆ. ಕುಟುಂಬದ ಹಿನ್ನೆಲೆ ಇದ್ದರೆ ಕ್ಷೇತ್ರ ಪ್ರವೇಶಿಸುವುದು, ಅಸ್ತಿತ್ವ ಕಂಡುಕೊಳ್ಳುವುದು ಸುಲಭವಾಗುತ್ತದೆ. ನನ್ನಂಥ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಟಿಕೆಟ್‌ ನೀಡಿದೆ ಎಂಬ ಹೆಮ್ಮೆ ಇದೆ.

ನಿಮ್ಮ ಎದುರು ಹಿರಿಯ ಮತ್ತು ಅನುಭವಿ ರಾಜಕಾರಣಿ ಕಣದಲ್ಲಿದ್ದಾರೆ. ಅವರ ಬಗ್ಗೆ ಏನು ಹೇಳುವಿರಿ?

ಬಿಜೆಪಿಯ ಪ್ರಲ್ಹಾದ ಜೋಶಿ ಅವರೂ ಕಾರ್ಯಕರ್ತನಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಬೆಳೆದಿದ್ದಾರೆ. ಮತದಾರರ ಆಶೀರ್ವಾದ, ಪಕ್ಷದ ಬೆಂಬಲದಿಂದ ಈ ಕ್ಷೇತ್ರದಲ್ಲಿ ಈವರೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?

ಸವಾಲುಗಳೇನು ಇಲ್ಲ. ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಜನರ ಆಗ್ರಹ. ‘ಕಳಸಾ –ಬಂಡೂರಿ’ ಇನ್ನು ಯಾಕೆ ಮಾಡಿಸಿಲ್ಲ ಎಂದು ರೈತರು ಕೇಳುತ್ತಾರೆ. ಉದ್ಯೋಗ ಸೃಷ್ಟಿಗೆ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಯುವಜನರು ಕೇಳುತ್ತಾರೆ.

ಚುನಾವಣೆ ಪ್ರಚಾರ ಹೇಗೆ ಮಾಡುತ್ತಿದ್ದೀರಿ? ಹೊಸ ತಂತ್ರಗಳು ಇವೆಯೇ?

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ನನಗೆ ಶ್ರೀರಕ್ಷೆಯಾಗಿವೆ. ಈ ಬಾರಿ ಬದಲಾವಣೆ ಗಾಳಿ ಇದೆ. ಕ್ಷೇತ್ರದಲ್ಲಿನ ಗ್ರಾಮ, ಪಟ್ಟಣ, ವಾರ್ಡ್‌ಗಳಿಗೆ ತೆರಳಿ ಪಕ್ಷದ  ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಮತಯಾಚನೆ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾಸಕರಾದ ಎನ್‌.ಎಚ್‌.ಕೋನರೆಡ್ಡಿ, ಪ್ರಸಾದ್‌ ಅಬ್ಬಯ್ಯ, ವಿನಯ ಕುಲಕರ್ಣಿ ಅವರು ಬೆನ್ನಿಗೆ ನಿಂತಿದ್ದಾರೆ. ಪ್ರಚಾರ ಅಭಿಯಾನದ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತೇವೆ.

ಮತದಾರರು ನಿಮಗೆ ಯಾಕೆ ಮತ ಹಾಕಬೇಕು?

ಕ್ಷೇತ್ರದಲ್ಲಿನ (ಗ್ರಾಮೀಣ ಮತ್ತು ನಗರ) ಸಮಸ್ಯೆಗಳ ಅರಿವು ನನಗೆ ಇದೆ. ಜನರು ಸುಲಭವಾಗಿ ನನ್ನನ್ನು ಭೇಟಿ ಆಗಬಹುದು. ಜನರ ಎಲ್ಲ ಸಂಕಷ್ಟಗಳಿಗೆ ಸ್ಪಂದಿಸುವೆ. ಈ ಬಾರಿ ಬದಲಾವಣೆಗಾಗಿ ನನಗೆ ಮತ ಹಾಕಬೇಕು. ನನಗೂ ಒಂದು ಅವಕಾಶ ನೀಡಿ ಎಂದು ಕೋರುವೆ.

ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ನೀವು ಇಟ್ಟುಕೊಂಡಿರುವ ಕನಸು, ನಿರೀಕ್ಷೆಗಳೇನು?

ಮಹದಾಯಿ ಯೋಜನೆ ಕಾರ್ಯಗತಕ್ಕೆ ಶ್ರಮಿಸುತ್ತೇನೆ. ಕ್ಷೇತ್ರದಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.