ADVERTISEMENT

ಧಾರವಾಡದಲ್ಲಿ ಐಷಾರಾಮಿ ಶೌಚಾಲಯ!

ಸ್ವಚ್ಛ ಭಾರತ ಮಿಷನ್‌: 18 ಮೂತ್ರಾಲಯ ನಿರ್ಮಾಣ, ₹81.08 ಲಕ್ಷದ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 5:35 IST
Last Updated 28 ಡಿಸೆಂಬರ್ 2023, 5:35 IST
ಈಶ್ವರ ಉಳ್ಳಾಗಡ್ಡಿ, ಆಯುಕ್ತ
ಈಶ್ವರ ಉಳ್ಳಾಗಡ್ಡಿ, ಆಯುಕ್ತ   

ಹುಬ್ಬಳ್ಳಿ: ಸ್ವಚ್ಛ ಭಾರತ ಮಿಷನ್‌ 2.0 ಯೋಜನೆಯಡಿ ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಐಷಾರಾಮಿ (ಆಕಾಂಕ್ಷಿ ಶೌಚಾಲಯ) ಸಾರ್ವಜನಿಕ ಶೌಚಾಲಯ ಹಾಗೂ 18 ಸಾರ್ವಜನಿಕ ಮೂತ್ರಾಲಯ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ₹81.08 ಲಕ್ಷದ ಟೆಂಡರ್‌ ಕರೆಯಲಾಗಿದ್ದು, ಇದೇ 30ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣವಾಗಲಿವೆ. ಧಾರವಾಡದ ಮೀನು ಮಾರುಕಟ್ಟೆ ಬಳಿ ಐಷಾರಾಮಿ ಶೌಚಾಲಯ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ. ಮೂತ್ರಾಲಯವನ್ನು ಯಾವ್ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎನ್ನುವ ಕುರಿತು ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ, 11 ಸ್ಥಳಗಳನ್ನು ಅಂತಿಮಗೊಳಿಸಿದ್ದಾರೆ. ಸಾರ್ವಜನಿಕ ಮೂತ್ರಾಲಯಗಳಿಲ್ಲದ, ಸಾರ್ವಜನಿಕರಿಗೆ ಅನುಕೂಲವಾಗುವ ಧಾರವಾಡದ ಏಳು ಹಾಗೂ ಹುಬ್ಬಳ್ಳಿಯ 11 ಸ್ಥಳಗಳನ್ನು ಗುರುತಿಸಿ, ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ.

ಧಾರವಾಡದ ಮಾಳಮಡ್ಡಿ, ಸಪ್ತಾಪುರ, ಪದ್ಮಾವತಿ ಚಿತ್ರಮಂದಿರ, ನೆಹರೂ ನಗರ, ಕೆಲಗೇರಿ, ಶ್ರೀನಗರ ಹಾಗೂ ಹುಬ್ಬಳ್ಳಿಯ ರಾಜೀವಗಾಂಧಿ ಶಾಲೆ ಹಿಂಭಾಗ, ಟೌನ್‌ಹಾಲ್‌ ಮುಂಭಾಗ, ಹಳೇಹುಬ್ಬಳ್ಳಿ ಸೇತುವೆ ಬಳಿ, ಮಂಟೂರು ಮುಖ್ಯರಸ್ತೆ, ಚನ್ನಪೇಟೆ ಹಾಗೂ ಇತರ ಸ್ಥಳಗಳಲ್ಲಿ ಸಾರ್ವಜನಿಕ ಮೂತ್ರಾಲಯ ನಿರ್ಮಾಣವಾಗಲಿದೆ. ಇವುಗಳಿಗೆ ಕೇಂದ್ರ ಸರ್ಕಾರ ₹15.21 ಲಕ್ಷ, ರಾಜ್ಯ ಸರ್ಕಾರ ₹10.14 ಲಕ್ಷ ಹಾಗೂ ಮಹಾನಗರ ಪಾಲಿಕೆ ₹20.74 ಲಕ್ಷ, ಒಟ್ಟು ₹46.08 ಲಕ್ಷ ಅನುದಾನ ನೀಡಲಿದೆ.

ADVERTISEMENT
ಶೌಚಾಲಯದ ವಿಶೇಷತೆ:
ಧಾರವಾಡದ ಮೀನು ಮಾರುಕಟ್ಟೆ ಬಳಿ ₹35 ಲಕ್ಷ ವೆಚ್ಚದ ಐಷಾರಾಮಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ₹8.25 ಲಕ್ಷ, ರಾಜ್ಯ ಸರ್ಕಾರ ₹5.50 ಲಕ್ಷ ಹಾಗೂ ಮಹಾನಗರ ಪಾಲಿಕೆ ₹11.25 ಲಕ್ಷ ಅನುದಾನ ನೀಡಲಿದೆ. ಪಾಲಿಕೆ ಹೆಚ್ಚುವರಿಯಾಗಿ ₹10 ಲಕ್ಷ ವಿನಿಯೋಗಿಸಿ, ಮಾದರಿ ಶೌಚಾಲಯವನ್ನಾಗಿ ನಿರ್ಮಿಸಲು ಯೋಜನೆ ರೂಪಿಸಿದೆ. ಈ ಶೌಚಾಲಯ ಐಷಾರಾಮಿ ಸ್ನಾನದ ಗೃಹಗಳು, ಟಚ್‌ಲೆಸ್ ಫ್ಲಶಿಂಗ್, ಸ್ತನ್ಯಪಾನ ಕೊಠಡಿಗಳು ಮತ್ತು ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್‌ಕಿನ್ ಇನ್ಸಿನರೇಟರ್‌ ಯಂತ್ರ, ವೀಲಿಂಗ್‌ ಚೇರ್‌ ಒಳಗೊಂಡಿರಲಿದೆ. ಇದನ್ನು ‘ಆಕಾಂಕ್ಷೆಯ ಶೌಚಾಲಯ’ ಎಂದು ಕರೆಯಲಾಗುತ್ತದೆ. ಸ್ವಚ್ಛ ಭಾರತ್ ಮಿಷನ್ 2.0 ಭಾಗವಾಗಿ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ನಗರಗಳನ್ನು ಬಯಲು ಶೌಚ ಮುಕ್ತಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.

‘ನಗರಾಭಿವೃದ್ಧಿ ಇಲಾಖೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ವಿಡಿಯೋ ಸಂವಾದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ದುರಸ್ತಿ, ನಿರ್ಮಾಣದ ಕುರಿತು ನಿರ್ದೇಶನ ನೀಡಿದ್ದರು. ಸೂಕ್ತ ಸ್ಥಳಗಳನ್ನು ಗುರುತಿಸಿ ಒಂದು ವಾರದಲ್ಲಿ ದೃಢೀಕರಣ ಪ್ರಮಾಣ ಸಲ್ಲಿಸುವಂತೆ ಸೂಚಿಸಿದ್ದರು. ಅದರನ್ವಯ ಅಂದಾಜು ಪತ್ರಿಕೆ ಸಿದ್ಧಪಡಿಸಿ, ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿದೆ’ ಎಂದು ‘ಪ್ರಜಾವಾಣಿ’ಗೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಶೌಚಾಲಯ ಮೂತ್ರಾಲಯದ ಯಾರು ನಿರ್ವಹಣೆ ಮಾಡಬೇಕು ಎನ್ನುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಇವುಗಳನ್ನು ಬಳಸಲು ಸಾರ್ವಜನಿಕರಿಂದ ₹1 ಅಥವಾ ₹2 ಶುಲ್ಕ ವಿಧಿಸುವ ಯೋಜನೆಯಿದೆ
– ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.