ಹುಬ್ಬಳ್ಳಿ: ಮಾದಿಗ ಸಮುದಾಯದವರು ಇಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಸಮಾವೇಶದಲ್ಲಿ ಕಾರ್ಯಕ್ರಮ ನಿರೂಪಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ ಹೇಳಿಕೆ ಹಾಗೂ ಅವರ ಕುರಿತಾದ ವಿಡಿಯೊ ದೃಶ್ಯಾವಳಿ ಪ್ರಸಾರ ಮಾಡಿದ್ದಕ್ಕೆ ಅದೇ ಸಮಾಜದ ಕೆಲ ಮುಖಂಡರು ವೇದಿಕೆಯಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಾದಿಗ ಮೀಸಲಾತಿಯ ಹಿನ್ನೆಲೆ ಕುರಿತು ಒಳಮೀಸಲಾತಿ ಹೋರಾಟಗಾರ ಈರಣ್ಣ ಮೌರ್ಯ ಮಾತನಾಡಿ, ‘ಒಳಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಒಲವು ಇಲ್ಲ. 2013–18ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಒಳಮೀಸಲಾತಿ ಬಗ್ಗೆ ಏನೂ ಕ್ರಮಕೈಗೊಳ್ಳಲಿಲ್ಲ’ ಎಂದು ಟೀಕಿಸಿದರು. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರ ದೃಶ್ಯಾವಳಿ ಪ್ರದರ್ಶಿಸಿದರು. ಇದಕ್ಕೂ ಮುಂಚೆ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದರು.
ವೇದಿಕೆ ಮೇಲಿದ್ದ ಮಾದಿಗ ಸಮುದಾಯದ ಹೋರಾಟಗಾರರಾದ ವೆಂಕಟೇಶ ಸಕಬಾಲ್ ಹಾಗೂ ಅಶೋಕ ದೊಡಮನಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಟೀಕಿಸುವುದು ಮುಖ್ಯವಲ್ಲ. ಒಳಮೀಸಲಾತಿ ಪಡೆಯಲು ಮುಂದೆ ಏನು ಮಾಡಬೇಕು ಎಂಬುದನ್ನು ಹೇಳಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ವೇದಿಕೆಯಿಂದ ಕೆಳಗಿಳಿದು, ಬಾಗಿಲಿನತ್ತ ಹೊರಟರು.
ವೇದಿಕೆ ಮೇಲಿದ್ದ ಶಾಸಕ ಅರವಿಂದ ಬೆಲ್ಲದ ಅವರು ತಕ್ಷಣ ಬಾಗಿಲು ಬಳಿ ತೆರಳಿ, ಅವರನ್ನು ತಡೆದು ವಾಪಸ್ ಕರೆತಂದರು.
ತಾಳ್ಮೆ ವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು. ಮಾಜಿ ಶಾಸಕ ಗೋವಿಂದ ಕಾರಜೋಳ ಹಾಗೂ ವೀರಭದ್ರಪ್ಪ ಹಾಲಹರವಿ ಅವರು ಪರಿಸ್ಥಿತಿ ತಿಳಿಗೊಳಿಸಿದರು. ಮೌರ್ಯ ಅವರ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.