ಕಲಘಟಗಿ: ಮಹಾ ಶಿವರಾತ್ರಿ ಅಂಗವಾಗಿ ಶುಕ್ರವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ ಪ್ರಮುಖ ಶಿವ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಶಿವಲಿಂಗಕ್ಕೆ ಹೋಮ, ಹವನ, ಅಭಿಷೇಕ ಹಾಗೂ ಪೂಜೆ ಮಾಡುವ ಮೂಲಕ ಜನರು ಸಂಭ್ರಮದಿಂದ ಶಿವರಾತ್ರಿ ಆಚರಿಸಿದರು.
ಬೆಳಿಗ್ಗೆ 4 ರಿಂದ ಪೂಜಾ ಕಾರ್ಯಗಳು ಆರಂಭಗೊಂಡು ಈಶ್ವರ ದೇವರಿಗೆ ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾರ್ಚನೆ, ಹೂವುಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಭಕ್ತರು ಉಪವಾಸ ವ್ರತ ಆಚರಿಸಿದರು.
ಪಟ್ಟಣದ ಬೆಂಡಿಗೇರಿ ಓಣಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಮಲ್ಲಿಕಾರ್ಜುನ ದೇವರ ಮಹಾ ಮೂರ್ತಿಗೆ ಶುಕ್ರವಾರ ಬ್ರಾಹ್ಮೀ ಮಹೂರ್ತದಲ್ಲಿ ದೇವಸ್ಥಾನದ ಅರ್ಚಕರಾದ ವೀರೇಶ ಶಾಸ್ತ್ರೀಗಳಿಂದ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಹಾಗೂ ಪುಷ್ಪಾಲಂಕಾರ ನೆರವೇರಿಸಲಾಯಿತು.
ತಾಲ್ಲೂಕಿನ ಐತಿಹಾಸಿಕ ದೇವಾಲಯಗಳಾದ ತಂಬೂರ ಬಸವಣ್ಣ ದೇವರು, ಕಾಮಧೇನು, ತಾವರಗೇರಿ, ಬೀರವಳ್ಳಿ ದೇವಾಲಯಗಳಲ್ಲಿ ಶಿವ ದೇವರಿಗೆ ವಿಶೇಷ ಪೂಜೆ ನೆರವೇರಿದವು. ಮಹಾಶಿವರಾತ್ರಿಯ ಅಂಗವಾಗಿ ವಿವಿಧ ಭಜನೆಗಳು ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.