ಅಳ್ನಾವರ: ಪ್ರತಿ ಮಂಗಳವಾರ ಇಲ್ಲಿನ ವಾರದ ಸಂತೆ ನಡೆಯುತ್ತದೆ. ಅಂದು ಬೆಳಿಗ್ಗೆ ಪಟ್ಟಣ ಪಂಚಾಯ್ತಿ ಕಚೇರಿ ಹತ್ತಿರದ ಆಜಾದ್ ರಸ್ತೆಯಲ್ಲೇ ಸರಕು ಮಾರುಕಟ್ಟೆ (ಚಿಲ್ಲರೆ) ನಡೆದು, ಅದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ.
ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಬೆಳಗಾವಿ-ತಾಳಗುಪ್ಪ ಹೆದ್ದಾರಿಯೂ ಹೌದು. ಸಂತೆ ದಿನ ಬೆಳಿಗ್ಗೆ 7 ಗಂಟೆಯಿಂದ ಎರಡು ತಾಸು ಇಲ್ಲಿ ತರಕಾರಿ ಚಿಲ್ಲರೆ ಮಾರಾಟ ಜೋರಾಗಿ ನಡೆಯುತ್ತದೆ. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ದೂರದಿಂದ ಮೂಟೆಗಟ್ಟಲೆ ತರಕಾರಿ ಹೊತ್ತು ತರುವ ಮಾರಾಟಗಾರರು ಇಲ್ಲಿ ತಮ್ಮ ಸರಕುಗಳನ್ನು ಇಳಿಸುವುದು ಹಾಗೂ ಮಾರಾಟ ಮಾಡುವುದು ರೂಢಿ. ಈ ಸ್ಥಳ ಪಟ್ಟಣದ ಮುಖ್ಯ ವೃತ್ತವೂ ಆಗಿದೆ.
ರಾಜ್ಯ ಹಾಗೂ ಹೊರ ರಾಜ್ಯದ ವಾಹನಗಳು ಇಲ್ಲಿ ಸಂಚರಿಸುತ್ತವೆ. ನಿತ್ಯದ ತರಕಾರಿ ಮಾರುವವರು ಕೂಡ ಇಲ್ಲಿಯೇ ವ್ಯವಹಾರ ಮಾಡುತ್ತಾರೆ. ರಸ್ತೆಯಲ್ಲಿ ಭಾರಿ ವಾಹನ ಸೇರಿ ದೊಡ್ಡ ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ.
‘ಆಜಾದ್ ರಸ್ತೆಯಲ್ಲಿ ನಿತ್ಯ ನಡೆಯುವ ತರಕಾರಿ ಮಾರಾಟ ಸ್ಥಳಾಂತರಿಸಬೇಕು. ತರಕಾರಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಗುರುತಿಸಿ ಅವರಿಗೆ ಸೌಲಭ್ಯ ನೀಡಬೇಕು ಹಾಗೂ ಮಂಗಳವಾರ ನಡೆಯುವ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಬೇಕು. ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿ ಶಾಂತಾರಾಮ ಪಾಟೀಲ ಒತ್ತಾಯಿಸುತ್ತಾರೆ.
ಪಟ್ಟಣ ಪಂಚಾಯ್ತಿ ಆಡಳಿತ ಹಾಗೂ ಪೋಲಿಸ್ ಇಲಾಖೆ ಈ ಕುರಿತು ಗಮನ ಹರಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಕೂಗು ಜನರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.