ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ | ಮೇಯರ್ ಸ್ಥಾನ; ಯಾರಿಗೆ ಅದೃಷ್ಟ?

29ರಂದು ಚುನಾವಣೆ; ತೆರೆಮರೆಯಲ್ಲಿ ಆಕಾಂಕ್ಷಿಗಳ ಕಸರತ್ತು

ಸತೀಶ ಬಿ.
Published 26 ಜೂನ್ 2024, 4:31 IST
Last Updated 26 ಜೂನ್ 2024, 4:31 IST
ಹುಬ್ಬಳ್ಳಿಯಲ್ಲಿನ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿಯಲ್ಲಿನ ಮಹಾನಗರ ಪಾಲಿಕೆ ಕಚೇರಿ    

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್‌, ಉಪಮೇಯರ್ ಆಯ್ಕೆಗೆ ಜೂನ್‌ 29ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅಗತ್ಯ ಸಂಖ್ಯಾಬಲ ಇರುವ ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ ಮೇಯರ್‌ ಸ್ಥಾನಕ್ಕೆ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಸತೀಶ ಹಾನಗಲ್‌, ಬೀರಪ್ಪ ಖಂಡೇಕಾರ, ಉಮೇಶಗೌಡ ಕೌಜಗೇರಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇದರಲ್ಲಿ ಪಕ್ಷದ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

‘ವೈಯಕ್ತಿಕ ವರ್ಚಸ್ಸು, ಪಕ್ಷ ನಿಷ್ಠೆ, ಉತ್ತಮ ಆಡಳಿತದ ಮೂಲಕ ಪಕ್ಷಕ್ಕೆ ಹೆಸರು ತರುವುದು, ಅನುಭವ, ಹಿರಿತನ ಆದರಿಸಿ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ’ ಎನ್ನುತ್ತವೆ ಮೂಲಗಳು.

ADVERTISEMENT

ಪರಿಣಾಮ ಬೀರಲಿದೆಯೇ ಆರೋಪ?

ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರಾಮಣ್ಣ ಬಡಿಗೇರ ವಿರುದ್ಧ ಆಶ್ರಯ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದರೆ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಬಿಜೆಪಿ ಬಲ ಯಥಾಸ್ಥಿತಿ

ಸರಸ್ವತಿ ಧೋಂಗಡಿ ಅವರ ಸದಸ್ಯತ್ವ ಅನರ್ಹತೆಯಿಂದ ಬಿಜೆಪಿ ಬಲ 39ರಿಂದ 38ಕ್ಕೆ ಕುಸಿದಿತ್ತು. ಅವರ ಅನರ್ಹತೆ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದ್ದರಿಂದ ಬಿಜೆಪಿ ಬಲ ಯಥಾಸ್ಥಿತಿಗೆ ಬಂದಿದೆ.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ದುರ್ಗಮ್ಮ ಶಶಿಕಾಂತ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಅವರು ಪ್ರಮುಖ ಆಕಾಂಕ್ಷಿಗಳಿದ್ದಾರೆ.

ಸಭೆ 28ರಂದು

ಮೇಯರ್, ಉಪಮೇಯರ್ ಆಯ್ಕೆ ಕುರಿತು ಚರ್ಚೆ ನಡೆಸಲು ಜೂನ್ 28ರಂದು ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪಾಲಿಕೆಯ ಬಿಜೆಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಪಕ್ಷದ ಮಹಾನಗರ ಪಾಲಿಕೆ ಸದಸ್ಯರಿಗೆ ಈಗಾಗಲೇ ವಿಪ್‌ ಜಾರಿ ಮಾಡಲಾಗಿದೆ. ನಮಗೆ ಅಗತ್ಯ ಸಂಖ್ಯಾಬಲವಿದ್ದು, ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸುವುದು ನಿಶ್ಚಿತ’ ಎಂದು ಮಹಾನಗರ ಪಾಲಿಕೆ ಸದಸ್ಯ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹೇಳಿದ್ದಾರೆ.

ಸರಸ್ವತಿ ಧೋಂಗಡಿ ಅವರ ಸದಸ್ಯತ್ವ ಅನರ್ಹತೆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅವರಿಗೆ ಮತದಾನ ಮಾಡಲು ಅವಕಾಶ ಇದ್ದು ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಲಾಗುವುದು.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ

ಕಾಂಗ್ರೆಸ್‌ನಿಂದ ಮೇಯರ್‌ ಸ್ಥಾನಕ್ಕೆ ಇಮ್ರಾನ್ ಯಲಿಗಾರ, ಇಕ್ಬಾಲ ನವಲೂರ, ಉಪಮೇಯರ್ ಸ್ಥಾನಕ್ಕೆ ಸುವರ್ಣ ಕಲ್ಲಕುಂಟ್ಲ, ಕವಿತಾ ಕಬ್ಬೇರ, ಮಂಗಳಮ್ಮ ಹಿರೇಮನಿ ಅವರು ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಬಳಿ ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಇದು ಸಾಂಕೇತಿಕ ಸ್ಪರ್ಧೆಯಾಗಲಿದೆ.

‘ಬುಧವಾರ ಅಥವಾ ಗುರುವಾರ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಚುನಾವಣೆ ವೇಳೆ ಪಕ್ಷದ ವಿರುದ್ಧ ಕೆಲಸ ಮಾಡಿದರೆ ಅಂತವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಹೇಳಿದರು.

ಅನರ್ಹತೆ ಆದೇಶ ರದ್ದು

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 54ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸರಸ್ವತಿ ಧೋಂಗಡಿ ಅವರನ್ನು ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಆದೇಶವನ್ನು ಹೈಕೋರ್ಟ್‌ನ ಧಾರವಾಡ ಪೀಠವು ರದ್ದುಪಡಿಸಿದೆ. ಪಾಲಿಕೆಯ 22ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ವೇಳೆ ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣಕ್ಕೆ ಸರಸ್ವತಿ ಅವರ ಸದಸ್ಯತ್ವವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು. ‘ಸರಸ್ವತಿ ಅವರು ಗರ್ಭಿಣಿಯಾಗಿದ್ದ ಕಾರಣಕ್ಕೆ ಮೇಯರ್ ಉಪಮೇಯರ್ ಚುನಾವಣೆಯ ಮತದಾನಕ್ಕೆ ಗೈರಾಗಿದ್ದರು. ಅನರ್ಹತೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದೆವು. ನ್ಯಾಯಾಲಯದ ಆದೇಶದಿಂದ ಖುಷಿಯಾಗಿದೆ’ ಎಂದು ಸರಸ್ವತಿ ಅವರ ಪತಿ ವಿನಾಯಕ ಧೋಂಗಡಿ ತಿಳಿಸಿದರು.

ಪಕ್ಷಗಳ ಬಲಾಬಲ

ಬಿಜೆಪಿ; 39 ಕಾಂಗ್ರೆಸ್‌;33 ಎಐಎಂಐಎಂ; 3 ಜೆಡಿಎಸ್‌; 1 ಪಕ್ಷೇತರ; 6 ಮತ ಲೆಕ್ಕಾಚಾರ 90; ಚಲಾವಣೆಯಾಗಲಿರುವ ಒಟ್ಟು ಮತಗಳು 48; ಬಿಜೆಪಿ ಬಳಿಯಿರುವ ಮತಗಳು (ಪಾಲಿಕೆ ಸದಸ್ಯರು ಸಂಸದ ಶಾಸಕರು ವಿಧಾನಪರಿಷತ್ ಸದಸ್ಯರು ಪಕ್ಷೇತರರು ಸೇರಿ) 37; ಕಾಂಗ್ರೆಸ್ ಬಳಿಯಿರುವ ಮತಗಳು (ಪಾಲಿಕೆ ಸದಸ್ಯರು ಶಾಸಕರು ಪಕ್ಷೇತರರು ಸೇರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.