ADVERTISEMENT

ಕಸ ಸಂಗ್ರಹಕ್ಕೆ 41 ಹೊಸ ಆಟೊ ಟಿಪ್ಪರ್‌

ಸದಸ್ಯರಿಗೆ ಹೆಚ್ಚುವರಿ ವಿಷಯಪಟ್ಟಿ ನೀಡದೆ ವಿಷಯ ಪ್ರಸ್ತಾಪ; ತರಾತುರಿಯಲ್ಲಿ ಪಟ್ಟಿಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:58 IST
Last Updated 19 ಜೂನ್ 2024, 15:58 IST
ಧಾರವಾಡದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉಪಮೇಯರ್‌ ಸತೀಶ್‌ ಹಾನಗಲ್‌ ಮತ್ತು ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ ವಾಗ್ವಾದ ನಡೆಸಿದರು –ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉಪಮೇಯರ್‌ ಸತೀಶ್‌ ಹಾನಗಲ್‌ ಮತ್ತು ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ ವಾಗ್ವಾದ ನಡೆಸಿದರು –ಪ್ರಜಾವಾಣಿ ಚಿತ್ರ   

ಧಾರವಾಡ: ‘ಪಾಲಿಕೆಗೆ ಹೊಸದಾಗಿ 41 ಆಟೊ ‌ಟಿಪ್ಪರ್‌ (ಕಸ ಸಂಗ್ರಹ ವಾಹನ) ಖರೀದಿಸಲಾಗಿದೆ. ವಲಯವಾರು ಈ ವಾಹನಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬು‌ಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಚ್ಛ ಭಾರತ ಅಭಿಯಾನ (ಎಸ್‌ಬಿಎಂ) ಉಳಿಕೆ ಅನುದಾನವನ್ನು ಆಟೊ ‌ಟಿಪ್ಪರ್‌ ಖರೀದಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಒಟ್ಟು 132 ವಾಹನ ಖರೀದಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. 101ವಾಹನ ಖರೀದಿಗೆ ಅನುಮೋದನೆ ಲಭಿಸಿದೆ. ಎರಡನೇ ಹಂತದಲ್ಲಿ ಬಾಕಿ 60 ವಾಹನ ಖರೀದಿಸಲಾಗುವುದು’ ಎಂದರು.

ADVERTISEMENT

ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಗೆ ಕಸ ಸಂಗ್ರಹಕ್ಕೆ 470 ಆಟೊ ಟಿಪ್ಪರ್‌ ಬೇಕು. ಪ್ರಸ್ತುತ 216 ವಾಹನಗಳು ಇವೆ. ಈ ಪೈಕಿ 199 ವಾಹನಗಳಿಗೆ ಜಿಪಿಎಸ್‌ ವ್ಯವಸ್ಥೆ ಇದೆ. ಸಾಮಾನ್ಯವಾಗಿ ನಿತ್ಯ 15 ವಾಹನಗಳು ರಿಪೇರಿಗೆ ಹೋಗುತ್ತವೆ ಎಂದು ವಿವರ ನೀಡಿದರು.

ಕಾಂಪ್ಯಾಕ್ಟರ್‌ ವಾಹನಗಳು ಶೀಘ್ರದಲ್ಲಿ ಪೂರೈಕೆಯಾಗಲಿವೆ. ಪಾಲಿಕೆಯಲ್ಲಿ ಪೌರಕಾರ್ಮಿಕರು ಹೆಚ್ಚು ಇದ್ದಾರೆ. ಕಸ ವಿಲೇವಾರಿ, ಕಸ ಸಂಗ್ರಹ ವಾಹನ, ಪೌರಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಹರಿಸಲು ಕ್ರಮ ವಹಿಸಲಾಗುವುದು. ಈ ವಾರದಿಂದ ಪ್ರತಿವಾರ ಒಂದು ವಾರ್ಡ್‌ಗೆ ಭೇಟಿ ನೀಡಿ ವ್ಯವಸ್ಥೆಗಳ ವೀಕ್ಷಣೆ, ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಡೆಂಗಿ ನಿಯಂತ್ರಣ ನಿಟ್ಟಿನಲ್ಲಿ ಪ್ರತಿ ವಲಯಕ್ಕೆ ₹5 ಲಕ್ಷ ಮಂಜೂರು ಮಾಡಲಾಗಿದೆ. ‘ಫಾಗಿಂಗ್‌‘, ‘ಸ್ಪ್ರೇಯಿಂಗ್‌’, ಗಪ್ಪಿ ಮೀನು ಸಾಕಣೆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಕಸ ಸಂಗ್ರಹಣೆಗೆ ವಾಹನಗಳು ನಿಯಮಿತವಾಗಿ ಬರಲ್ಲ. ಕಸವನ್ನು ಎಲ್ಲಿ ಹಾಕಬೇಕು? ಸಮಸ್ಯೆ ಗಮನಕ್ಕೆ ತಂದರೂ ಅಧಿಕಾರಿಗಳು, ಗುತ್ತಿಗೆದಾರರು ಸ್ಪಂದಿಸಲ್ಲ’ ಎಂದು ಸದಸ್ಯ ಚಂದ್ರಶೇಕರ ಮನಗುಂಡಿ ಹೇಳಿದರು.

‘ನೀರಿನ ಪೂರೈಕೆ ಸರಿಯಿಲ್ಲ. ಕಲುಷಿತ ನೀರು ಕುಡಿದು ಜನರಿಗೆ ರೋಗ ಬಾಧಿಸಿದರೆ, ಜನ ಮೃತಪಟ್ಟರೆ ಹೊಣೆ ಯಾರು?’ ಎಂದು ಸದಸ್ಯೆ ಲಕ್ಷ್ಮಿ ಹಿಂಡಸಗೇರಿ ಏರುಧ್ವನಿಯಲ್ಲಿ ಪ್ರಶ್ನಿಸಿದರು.

‘ಡೆಂಗಿ ಪ್ರಕರಣಗಳು ಜಾಸ್ತಿಯಾಗಿವೆ. ಫಾಗಿಂಗ್‌ ಮಾಡಿಲ್ಲ. ನಿರ್ವಹಣೆ ಕೊರತೆಯಿಂದ ಸಾರ್ವಜನಿಕ ಶೌಚಾಲಯಗಳು ಅಧೋಗತಿಯಲ್ಲಿವೆ. ಸಮಸ್ಯೆಗಳನ್ನು ಗಮನಕ್ಕೆ ತಂದರೂ ಸಂಬಂಧಪಟ್ಟವರು ಪರಿಹರಿಸಲು ಕ್ರಮ ವಹಿಸಿಲ್ಲ’ ಎಂದು ಸದಸ್ಯ ಶಿವಾನಂದ ಮೆಣಸಿನಕಾಯಿ ಹೇಳಿದರು.

‘ಜೆಟ್‌’ ಯಂತ್ರ, ‘ಡಿ ಸಿಲ್ಟಿಂಗ್‌‘ ಯಂತ್ರ ಸಾಕಷ್ಟು ಇಲ್ಲ. ನಿಯಂತ್ರಣ ಕೊಠಡಿ ನಾಮಕಾವಸ್ಥೆಗೆ ಇದೆ. ಫೋನ್‌ ಮಾಡಿದರೆ ಯಾರೂ ಸ್ಪಂದಿಸಲ್ಲ’ ಎಂದು ಸದಸ್ಯರೊಬ್ಬರು ದೂರಿದರು.

‘ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು’ ಎಂದು ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಧಾರವಾಡದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದು ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ ಅವರು ಮೇಯರ್‌ ಆಸನದ ಮುಂಭಾಗದಲ್ಲಿ ಧರಣಿ ಕುಳಿತರು –ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಲಕ್ಷ್ಮಿ ಹಿಂಡಸಗೇರಿ ಮಾತನಾಡಿದರು –ಪ್ರಜಾವಾಣಿ ಚಿತ್ರ

ಮೇಯರ್‌ ಗೈರು

ಮೇಯರ್‌ ವೀಣಾ ಬರದ್ವಾಡ ಅವರು ಸಭೆಗೆ ಗೈರು ಹಾಜರಾಗಿದ್ದರು. ಉಪಮೇಯರ್‌ ಸತೀಶ್‌ ಎಸ್‌ ಹಾನಗಲ್‌ ಅವರು ಮೇಯರ್‌ ಸ್ಥಾನದಲ್ಲಿ ಸಭೆ ನಿರ್ವಹಿಸಿದರು. ತರಾತುರಿಯಲ್ಲಿ ವಿಷಯ ಪಟ್ಟಿಗೆ ಅನುಮೋದನೆ ವಿರೋಧ ಪಕ್ಷದವರ ಅನುಪಸ್ಥಿತಿಯಲ್ಲಿ ವಿಷಯ ಪ‍ಟ್ಟಿಯ 10 ಹೆಚ್ಚುವರಿ ವಿಷಯ ಪಟ್ಟಿಯ ಸುಮಾರು 14 ವಿಷಯಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಆಯುಕ್ತರು ₹50 ಲಕ್ಷಕ್ಕಿಂತ ಹೆಚ್ಚಿನ ಅನುದಾನ ಹಂಚಿಕೆ ಮಾಡಲು ಸಭೆ ಒಪ್ಪಿಗೆ ನೀಡಿದ್ದರೆ ಮಾತ್ರ ನಾನು ಅನುಮೋದಿಸಬಹುದು ಎಂದು ಆಯಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು. ‘ಈ ನಿಟ್ಟಿನಲ್ಲಿ ಒಪ್ಪಿಗೆ ನೀಡಲಾಗಿದೆ’ ಎಂದು ಉಪಮೇಯರ್‌ ಸತೀಶ್‌ ಹಾನಗಲ್‌ ತಿಳಿಸಿದರು. ಅವಳಿಗೆ ನಗರದಲ್ಲಿ ಬೆಳೆಸಲು ಅರಣ್ಯ ಇಲಾಖೆಯಿಂದ ಒಂದು ಲಕ್ಷ ಸಸಿಗಳ ಖರೀದಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಗೊಂದಲದ ಗೂಡಾದ ಸಭೆ

ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷದ ಸದಸ್ಯರ ಗದ್ದಲ ಸಭಾತ್ಯಾಗ ಸದಸ್ಯರಿಗೆ ಹೆಚ್ಚುವರಿ ವಿಷಯ ಪಟ್ಟಿಯ ಪ್ರತಿ ನೀಡದೆ ಸಭೆಯಲ್ಲಿ ವಿಷಯಗಳ ಪ್ರಸ್ತಾಪ ತರಾತುರಿಯಲ್ಲಿ ವಿಷಯಗಳಿಗೆ ಅನುಮೋದನೆ ಸದಸ್ಯರ ಪ್ರಶ್ನೆಗಳಿಗೆ ಅಧಿಕಾರಿಗಳ ಅರೆಬರೆ ಉತ್ತರಗಳಿಂದ ಪಾಲಿಕೆ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು. ಕೋರಂ ಕೊರತೆಯಿಂದ ಮೊದಲು ಸಭೆಯನ್ನು ಅರ್ಧ ಗಂಟೆ ಮುಂದೂಡಲಾಗಿತ್ತು. 11.30ಕ್ಕೆ ಸಭೆ ಆರಂಭವಾಯಿತು. ಮೇುಯರ್‌ ಅವರು ವಿಷಯ ಪಟ್ಟಿ ಚರ್ಚೆಗೆ ಅವಕಾಶ ನೀಡಬೇಕು. ನಮ್ಮ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು ಎಂದು ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲಕುಂಟ್ಲ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ವಾಗ್ವಾದ ನಡೆಯಿತು. ನಂತರ ಕಾಂಗ್ರೆಸ್‌ ಸದಸ್ಯರು ಸಭೆಯಿಂದ ಹೊರನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.