ADVERTISEMENT

ನರೇಗಾ; ಗುರಿ ಸಾಧನೆ ಸವಾಲು

ಚುನಾವಣೆ ಕಾರಣ ಹಿನ್ನಡೆ: ಮಳೆ; ಕೃಷಿಯತ್ತ ಮುಖ ಮಾಡಿದ ರೈತರು

ಗೋವರ್ಧನ ಎಸ್‌.ಎನ್‌.
Published 25 ಮೇ 2024, 7:16 IST
Last Updated 25 ಮೇ 2024, 7:16 IST
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರು
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರು   

ಹುಬ್ಬಳ್ಳಿ: ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ನರೇಗಾ ವರದಾನವಾಗಿದ್ದರೂ, ಚುನಾವಣೆ ಕಾರಣದಿಂದ ಹೆಚ್ಚಿನ ಮಾನವದಿನ ಸೃಜನೆಗೆ ತೊಡಕಾಗಿತ್ತು. ಚುನಾವಣೆ ನಂತರ ಪ್ರಗತಿ ಕಂಡಿದ್ದರೂ, ಮಳೆಯ ಕಾರಣ ನಿಗದಿತ ಗುರಿ ಸಾಧಿಸುವ ಸವಾಲು ಎದುರಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ 25 ಲಕ್ಷ ಮಾನವ ದಿನ ಸೃಜನೆ ಗುರಿ ನಿಗದಿಯಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಶೇ 12.04ರಷ್ಟು ಪ್ರಗತಿಯಾಗಿದೆ. ಮಳೆಯಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಮುಂಗಾರು–ಹಿಂಗಾರು ಹಂಗಾಮಿನಲ್ಲಿ ರೈತರು ನರೇಗಾ ಕಾಮಗಾರಿಗಳಲ್ಲಿ ತೊಡಗುವುದು ಕಡಿಮೆ.

35 ಲಕ್ಷ ಗುರಿ ಇಟ್ಟುಕೊಂಡ ಗದಗ ಜಿಲ್ಲೆಯಲ್ಲಿ ಈಗಾಗಲೇ ಶೇ 46.13ರಷ್ಟು ಮಾನವದಿನ ಸೃಜನೆ ಸಾಧ್ಯವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 60 ಲಕ್ಷ ಗುರಿಯಲ್ಲಿ ಶೇ 38.66ರಷ್ಟು, ವಿಜಯನಗರ ಜಿಲ್ಲೆಯಲ್ಲಿ 73 ಲಕ್ಷ ಗುರಿಯಲ್ಲಿ ಶೇ 28.12ರಷ್ಟು ಸಾಧನೆಯಾಗಿದೆ.

ADVERTISEMENT

‘ನರೇಗಾ ಕಾಮಗಾರಿಗೆ ಕೆಲ ತಿಂಗಳ ಹಿಂದೆ ಅನುದಾನ ಬಂದಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾರ್ಮಿಕರು ಪ್ರಚಾರಕ್ಕೆ ತೆರಳಿದರು, ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರಿಂದ ಮಾನವದಿನ ಸೃಜನೆಗೆ ಹಿನ್ನಡೆಯಾಗಿತ್ತು. ಇನ್ಮುಂದೆ ಮಳೆ ಆಧರಿಸಿ, ಅಗತ್ಯ ಇರುವೆಡೆ ಹೆಚ್ಚು ಮಾನವದಿನ ಸೃಜಿಸಲಾಗುತ್ತದೆ. ನಿಗದಿತ ಗುರಿ ತಲುಪಲು ಶ್ರಮಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿಯ ನರೇಗಾ ಅಧಿಕಾರಿಯೊಬ್ಬರು ತಿಳಿಸಿದರು. 

‘ಚುನಾವಣೆ ಬಳಿಕವೂ ಮೇ ತಿಂಗಳಲ್ಲಿ ಶೇ 80ರಷ್ಟು ಪ್ರಗತಿ ಸಾಧಿಸುವ ಹಾದಿಯಲ್ಲಿದ್ದೇವೆ. ಮಳೆಗಾಲದಲ್ಲೂ ಕೆಲವು ಕಾಮಗಾರಿ ನಡೆಸಲಾಗುತ್ತದೆ. ಜಮೀನು ಇಲ್ಲದವರು ನರೇಗಾ ಕೆಲಸಕ್ಕೆ ಬರುತ್ತಾರೆ. ಮಳೆ ಆಧರಿಸಿ ಕೆಲವು ರೈತರು ಕಾಮಗಾರಿಗಳಲ್ಲಿ ತೊಡಗುತ್ತಾರೆ. ಹಾಗಾಗಿ, ಗುರಿ ಸಾಧನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗದು. ನರೇಗಾ ಯೋಜನೆಯತ್ತ ಜನರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ದಿನಗಳಿಲ್ಲ: ಭೀಕರ ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು 100ಗಳ ಕೆಲದ ಮಿತಿಯನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, ಅದು ಜಾರಿಯಾಗಿಲ್ಲ.

‘ಕೇಂದ್ರದಿಂದ ಈ ಬಗ್ಗೆ ಮಂಜೂರಾತಿ ಸಿಗದ ಕಾರಣ ಹೆಚ್ಚುವರಿ ದಿನಗಳ ಕೆಲಸ ನೀಡಲಾಗುತ್ತಿಲ್ಲ’ ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ವಿಜಯಕುಮಾರ್‌ ತಿಳಿಸಿದರು.  

.ತಿಂಗಳ ಗುರಿಗಿಂತ ವಾರ್ಷಿಕ ಗುರಿ ಸಾಧನೆಗೆ ಒತ್ತು ನೀಡಲಾಗುತ್ತದೆ. ಕಾಮಗಾರಿಗಳ ಸಂಖ್ಯೆಗಿಂತ ಗುಣಮಟ್ಟ ಮುಖ್ಯವಾಗುತ್ತದೆ.
–ವಿಜಯಕುಮಾರ್‌ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯ್ತಿ
ನರೇಗಾ ಉಪಯುಕ್ತವಾಗಿದ್ದು ಭ್ರಷ್ಟಾಚಾರ ಮುಕ್ತವಾಗಬೇಕು. ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಲು ಅಧಿಕಾರಿಗಳು ಬದ್ಧವಾಗಿರಬೇಕು.
–ಸಿದ್ದು ತೇಜಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.