ಹುಬ್ಬಳ್ಳಿ: ‘ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಸಮಾಜ ವಿದ್ರೋಹಿ ಶಕ್ತಿಗಳಿವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೇನೆ ಸೇರುವ ಮಾನಸಿಕತೆ ಹೊಂದಿರುವವರು ರೈಲು ಮತ್ತು ಬಸ್‌ಗಳನ್ನು ಸುಡುವುದಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡುವುದಿಲ್ಲ. ಪ್ರತಿಭಟನೆ ಹೆಸರಿನಲ್ಲಿ ಬಡವರಿಗೆ ತೊಂದರೆ ಕೊಡುವುದಿಲ್ಲ. ಹಿಂಸಾಚಾರ ನಡೆಸುತ್ತಿರುವವರೆಲ್ಲರೂ ಬೇರೆಯವರು. ಅಂತಹವರ ವಿರುದ್ಧ ಸ್ಥಳೀಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ’ ಎಂದರು.
‘ಹಿಂಸಾಚಾರಕ್ಕೆ ವಿರೋಧ ಪಕ್ಷದವರು ಸಹ ಕೈ ಜೋಡಿಸಿದ್ದಾರೆ ಎಂಬ ಆರೋಪವಿದೆ. ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ, ಇಂತಹ ದುಷ್ಕೃತ್ಯಗಳನ್ನು ನಡೆಸಲು ಕಾಂಗ್ರೆಸ್‌ನವರು ತಯಾರಾಗಿ ನಿಂತಿರುತ್ತಾರೆ. ಕೆಲವರು ಟೂಲ್ ಕಿಟ್ ಪ್ರಚಾರ ಮಾಡಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ದೂರಿದರು.
‘ಜಗತ್ತಿನ ಅನೇಕ ದೇಶಗಳಲ್ಲಿ ಇಂತಹ ಯೋಜನೆ ಇದೆ. ಹಿಂದೆಯೂ ಈ ಕುರಿತು ಅಧ್ಯಯನ ಹಾಗೂ ಸಮಾಲೋಚನೆಗಳು ನಡೆದಿಬರ. ಅಲ್ಲದೆ, ಶೇ 90ರಷ್ಟು ಹೆಚ್ಚು ಹಾಲಿ ಮತ್ತು ಮಾಜಿ ಸೇನಾಧಿಕಾರಿಗಳು ಯೋಜನೆಯನ್ನು ಬೆಂಬಲಿಸಿದ್ದಾರೆ. ಯುವಜನರು ಇದರ ಪ್ರಯೋಜನ ಪಡೆಯಬೇಕು’ ಎಂದರು.
‘ಯೋಜನೆ ಬಗ್ಗೆ ಗೊಂದಲವಿದ್ದರೆ ಚರ್ಚೆ ನಡೆಸಲಿ. ಸರ್ಕಾರ ಅವರ ಗೊಂದಲವನ್ನು ಪರಿಹರಿಸಲಿದೆ. ಹಾಗಂತ, ಜಾರಿಗೆ ತರಲೇಬಾರದು ಎನ್ನುವುದು ಸರಿಯಲ್ಲ. ಯೋಜನೆಯಡಿ ಸೇರಿದವರು ಸೇನೆಯಲ್ಲಿ ಮುಂದುವರಿಯಲು ಸಹ ಅವಕಾಶಗಳಿವೆ. ಈಗಿರುವ ಬೆಟಾಲಿಯನ್‌ನಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕೃಷಿ ಕಾಯ್ದೆಗಳನ್ನು ದೇಶದ ಶೇ 90ರಷ್ಟು ರೈತರು ಹಾಗೂ ಜನರು ಬೆಂಬಲಿಸಿದ್ದರು. ಆದರೂ, ವಿಭಿನ್ನ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಅವರು ಕಾಯ್ದೆಯನ್ನು ವಾಪಸ್ ಪಡೆದಿದ್ದರು. ಅಗ್ನಿಪಥ ಯೋಜನೆಯನ್ನು ಅದಕ್ಕೆ ಹೋಲಿಸಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.