ಹುಬ್ಬಳ್ಳಿ: ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿ ಅವರು ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಹತ್ತರವಾದುದು. ಅವರ ಬದುಕು ಮತ್ತು ಬರಹ ಅನುಕರಣೀಯ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಮೂರು ಸಾವಿರ ಮಠದಲ್ಲಿ ಗುರುವಾರ ನಡೆದ ಮಠದ ಡಾ. ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ 19ನೇ ಪುಣ್ಯ ಸ್ಮರಣೋತ್ಸವ ಹಾಗೂ ಡಾ. ಮೂಜಗಂ ಸಾಹಿತ್ಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಠವು ಹೆಸರಿಗಷ್ಟೇ ಲಿಂಗಾಯತ ಮಠವಾಗಿದ್ದರೂ, ಬಸವಣ್ಣನವರ ಆಶಯದಂತೆ ಜಾತ್ಯಾತೀತ ಮಠವಾಗಿ ತನ್ನ ಛಾಪು ಮೂಡಿಸಿಕೊಂಡು ಬಂದಿದೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಮೂರು ಸಾವಿರ ಶರಣರು ಇಲ್ಲಿ ಬಂದು ತಂಗಿದ್ದರು ಎಂಬುದು ಈ ಮಠದ ಹೆಮ್ಮೆಗೆ ನಿದರ್ಶನವಾಗಿದೆ. ಲಿಂಗ ಸಮಾನತೆ ಬೆಳೆಸಲು ಬಾಲಕಿಯರ ಶಾಲೆ ಆರಂಭಿಸಿದರು. ಮಠದ ಹೆಸರು ಇಡೀ ರಾಜ್ಯಕ್ಕೆ ಗೊತ್ತಾಗುವಂತಹ ಕೆಲಸಗಳನ್ನು ಸ್ವಾಮೀಜಿ ಮಾಡಿಕೊಂಡು ಬಂದರು ಎಂದು ನೆನೆದರು.
ಇಂದು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಸವಣ್ಣನವರ ತತ್ವಾದರ್ಶಗಳ ನೆಲೆಯಲ್ಲಿ ಸೌಹಾರ್ದ ಸಮಾಜವನ್ನು ಕಟ್ಟಬೇಕಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಯರವಿನತೆಲಿಮಠ ಮಾತನಾಡಿ, ಸಮಾಜಕ್ಕೆ ಮೂಜಗಂ ಅವರ ಕೊಡುಗೆ ಅನನ್ಯವಾದುದು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಪುನೀತನಾಗಿದ್ದೇನೆ. ಉದಾತ್ತ ಮೌಲ್ಯಗಳಿಂದ ಮನುಷ್ಯ ತನ್ನ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು. ಅದಕ್ಕಾಗಿ ಸತತ ಪರಿಶ್ರಮ ಅಗತ್ಯ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ, ಕೋವಿಡ್ ನಿಂದಾಗಿ ಸಮಾರಂಭವನ್ನು ಎರಡು ವರ್ಷ ಆಯೋಜಿಸಿರಲಿಲ್ಲ. ಗಂಗಾಧರ ಸ್ವಾಮೀಜಿ ಅವರು ಸಾಹಿತಿ ಮತ್ತು ವಚನಕಾರರೂ ಆಗಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಸಂಸ್ಕೃತದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದರು. ಚಿತ್ರ ಕಲಾವಿದರೂ ಆಗಿದ್ದರು. ಅವರ ಸವಿನೆನಪಿಗಾಗಿ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
16 ವರ್ಷಗಳವರೆಗೆ ಶಿವಯೋಗ ಮಂದಿರದಲ್ಲಿದ್ದ ಸ್ವಾಮೀಜಿ, ನಂತರ ಕಾಶಿಗೆ ಹೋಗಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪಾಂಡಿತ್ಯ ಪಡೆಯುತ್ತಾರೆ. ಮೂರು ಸಾವಿರ ಮಠದ ಉತ್ತರಾಧಿಕಾರಿಯಾದ ನಂತರ, ವಿದೇಶಕ್ಕೂ ಭೇಟಿ ನೀಡಿ, ಬಸವ ತತ್ವಗಳನ್ನು ಪ್ರಚಾರ ಮಾಡಿದರು. ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯ ಕನಸನ್ನು ಸ್ವಾಮೀಜಿ ಕಂಡಿದ್ದರು. ನಂತರ, ರಾಜ್ಯ ಸರ್ಕಾರ ಅವರ ಕನಸನ್ನು ನನಸು ಮಾಡಿತು. ಸ್ವತಃ ಕೃಷಿ ಮಾಡಿ ರೈತರಿಗೆ ಮಾದರಿಯಾದರು. ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಆರ್ಥಿಕ ಸ್ವಾವಲಂಬನೆಗೆ ಗುರು ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಹಿಂದೂ ಮತ್ತು ಮುಸ್ಲಿಮರ ನಡುವಣ ಸೌಹಾರ್ದದ ಕೊಂಡಿಯಾಗಿ ಸ್ವಾಮೀಜಿ ಇದ್ದರು.
ಮಠಕ್ಕೆ ₹10 ಲಕ್ಷ ದಾನ ನೀಡಿದ ಸದಾಶಿವ ಕುರ್ತಕೋಟಿ ಅವರನ್ನು ಸನ್ಮಾನಿಸಲಾಯಿತು. ಆ ಹಣವನ್ನು ನಿಶ್ಚಿತ ಠೇವಣಿಯಾಗಿಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಅತ್ಯುತ್ತಮ ಶಿಕ್ಷಕರೊಬ್ಬರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮಠದ ಸಮಿತಿಯವರು ಭರವಸೆ ನೀಡಿದರು.
ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎರಡೆತ್ತಿನಮಠ ಸಿದ್ಧಲಿಂಗ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಬೈಲಹೊಂಗಲ ಶಾಖಾ ಮೂರುಸಾವಿರಮಠ ನೀಲಕಂಠ ಸ್ವಾಮೀಜಿ, ನರಗುಂದ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಠದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ, ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬುರೆ, ಸದಾಶಿವ ಕುರ್ತಕೋಟಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.