ಹುಬ್ಬಳ್ಳಿ: ಲಾಕ್‌ಡೌನ್ ಅವಧಿಯಲ್ಲಿ ಮಹಾನಗರಗಳಿಂದ ಮರಳಿದ ವಲಸಿಗರು ಹಾಗೂ ಬಡ ಕೂಲಿ ಕಾರ್ಮಿಕರ ಕೈ ಹಿಡಿದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ(ಎಂಜಿಎನ್‌ಆರ್‌ಇಜಿಎ) ಈಗ ಬೇಡಿಕೆ ಕ್ಷೀಣಿಸಿದೆ. ಜಿಲ್ಲೆಯಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿದ ಪರಿಣಾಮ ಯೋಜನೆಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ.
ತಾಲ್ಲೂಕಿನಾದ್ಯಂತ ಬದು ನಿರ್ಮಾಣ, ಕೃಷಿ ಹೊಂಡ, ಅರಣ್ಯೀಕರಣ ಸೇರಿದಂತೆ ಒಟ್ಟು 2,635 ಕಾಮಗಾರಿಗಳು ನಡೆಯುತ್ತಿವೆ. ಆದರೆ, ಹೆಚ್ಚು ಕಾರ್ಮಿಕರಿಲ್ಲದೇ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ರೈತರು ಮುಂಗಾರು ಬಿತ್ತನೆ, ನಾಟಿ, ಹೆಂಟೆ ಒಡೆಯುವ ಕೆಲಸಗಳಲ್ಲಿ ನಿರತರಾಗಿದ್ದು ನರೇಗಾ ಕೆಲಸಕ್ಕೆ ಬೇಡಿಕೆ ಕ್ಷೀಣಿಸಿದೆ.
‘ಮುಂಗಾರಿನೊಳಗೆ ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯೀಕರಣ, ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಉಳಿದಂತೆ ಸಾಮುದಾಯಿಕಹಾಗೂ ಕೆಲ ವೈಯಕ್ತಿಕ ಕಾಮಗಾರಿಗಳಿಗೆ ಕಾಲಮಿತಿ ಇಲ್ಲ. ರೈತರು ಹಾಗೂಕೂಲಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುವುದು. ಜೂನ್ ಅಂತ್ಯದವರೆಗೆ ನಿಗದಿಯಾಗಿದ್ದ 54,156 ಮಾನವ ದಿನಗಳ ಗುರಿಯನ್ನು ಜೂನ್ ಆರಂಭದಲ್ಲೇ ತಲುಪಿ, ಶೇ 100 ರಷ್ಟು(67,996) ಪ್ರಗತಿ ಸಾಧಿಸಲಾಗಿದೆ. ಹಂತ ಹಂತವಾಗಿ ಕಾರ್ಮಿಕರ ಲಭ್ಯತೆ ಆಧಾರದ ಮೇಲೆ ಉಳಿದ ಕಾಮಗಾರಿಗಳನ್ನು ಮುಗಿಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಗಂಗಾಧರ ಕಂದಕೂರ ಪ್ರಜಾವಾಣಿಗೆ ತಿಳಿಸಿದರು.
ನರೇಗಾ ಕೂಲಿ ಕಾರ್ಮಿಕರಿಗೆ ಈ ಮೊದಲು ₹249 ಕೂಲಿ ನೀಡಲಾಗುತ್ತಿತ್ತು. ಏ.1ರಿಂದ ಕೂಲಿಯನ್ನು ₹275ಕ್ಕೆ ಹೆಚ್ಚಿಸಲಾಗಿದೆ. ಕಾರ್ಮಿಕರೇ ಸಾಮಗ್ರಿ ತಂದರೆ ಅವುಗಳ ದುರಸ್ತಿಗೆ ₹10 ನೀಡಲಾಗುತ್ತದೆ. 5 ಕಿ.ಮೀ.ಗಿಂತ ದೂರ ಹೋಗಿ ಕಾಮಗಾರಿ ಮಾಡಿದರೆ ಹೆಚ್ಚುವರಿ ₹10 ನೀಡಲಾಗುತ್ತಿದೆ. ರೈತರು ಯಾವಾಗ ಬೇಕಾದರೂ ಕೆಲಸ ಮಾಡಿ ಮುಗಿಸಬಹುದು. ಕೊರೊನಾ ಅವಧಿಯಲ್ಲಿ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.
ಬದು ಮೇಲೆ ಅರಣ್ಯೀಕರಣ
ಹೊಲಗಳಲ್ಲಿ ಬದು ನಿರ್ಮಾಣ ಮಾಡಿರುವ ರೈತರು ಅದರ ಮೇಲೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲು ನರೇಗಾದಡಿ ಬದು ಮೇಲೆ ಅರಣ್ಯೀಕರಣ ಯೋಜನೆ ಜಾರಿಗೊಳಿಸಲಾಗಿದೆ. ರೈತರು 10 ಮೀಟರ್‌ಗೆ ಒಂದರಂತೆ ಗಿಡಗಳನ್ನು ನೆಡಬಹುದು. ಗಿಡಗಳನ್ನು ಉಚಿತವಾಗಿ ನೀಡಲಾಗುವುದು. ಇಡೀ ಜಮೀನಿನಲ್ಲಿ ಅರಣ್ಯೀಕರಣ ಮಾಡಲು ಇಚ್ಛಿಸುವವರು ಅರಣ್ಯ ಇಲಾಖೆಯ ಪ್ರತ್ಯೇಕ ಯೋಜನೆಯನ್ನು ಬಳಸಿಕೊಳ್ಳಬಹುದು ಎಂದು ಗಂಗಾಧರ ಹೇಳಿದರು.
ಆಶ್ರಯ ಮನೆಗೂ ನರೇಗಾ ಕೂಲಿ:
ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಕೂಲಿ ನೀಡಲಾಗುವುದು. ಫಲಾನುಭವಿಗಳಿಗೆ ದಿನದ ಕೂಲಿ ₹275ರಂತೆ ಒಟ್ಟು 90 ದಿನಗಳ ಕೂಲಿಯಾಗಿ ಒಟ್ಟು 24,750 ಕೂಲಿ ಪಾವತಿಸಲಾಗುವುದು. ನರೇಗಾದಡಿಯ ಎಲ್ಲ ಕೆಲಸಗಳಿಗೂ ಯಾವುದೇ ಯಂತ್ರ ಬಳಸಕೂಡದು ಎಂದು ಅವರು ಹೇಳಿದರು.
2020–21ನೇ ಸಾಲಿನಲ್ಲಿ ಕೂಲಿಗಾಗಿ ₹1.01 ಕೋಟಿ, ಸಾಮಗ್ರಿ ವೆಚ್ಚಕ್ಕಾಗಿ ₹67.5 ಲಕ್ಷ ಅನುದಾನ ಬಂದಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಅನುದಾನ ಬಿಡುಗಡೆ ವಿಳಂಬವಾಗಿ ಸಮಸ್ಯೆಯಾಗಿತ್ತು. ಈಗ ಯಾವುದೇ ಸಮಸ್ಯೆ ಇಲ್ಲ. ಕೇಂದ್ರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.