ಹುಬ್ಬಳ್ಳಿ: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಬುಧವಾರ, ನಗರದಲ್ಲಿ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
'ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ಕುರಿತು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು' ಎಂದು ಸಚಿವರಲ್ಲಿ ವಿನಂತಿಸಿದರು.
'ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ. ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ, ಕೆಲ ವ್ಯಕ್ತಿಗಳನ್ನು ತೋರಿಸಿದ್ದಾರೆ. ಗಲಾಟೆ ಮಾಡಿದವರ ಮುಖಚಹರೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆ' ಎಂದು ಸಚಿವರೆದುರು ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹರ್ಷಿಕಾ ಪೂಣಚ್ಚ, 'ನಾವು ಹೋಟೆಲ್‌ಗೆ ಹೋದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕನ್ನಡ ಮಾತಾಡಿದ್ದಕ್ಕೆ ಜಗಳ ಮಾಡಿದ್ದಾರೆ. ದೌರ್ಜನ್ಯ ಎಸಗಿ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು' ಎಂದು ಹೇಳಿದರು.
'ನೇಹಾ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಬಂದಿದ್ದೇವೆ. ನಾವು ಯಾರ ತಂಟೆಗೂ ಹೋಗದೆ, ನಮ್ಮ ಪಾಡಿಗೆ ನಾವಿದ್ದೇವೆ. ದೌರ್ಜನ್ಯ ಎಸಗಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಚಿವ ಜೋಶಿ ಅವರಲ್ಲಿ ಒತ್ತಾಯಿಸಿದ್ದೇನೆ. ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ' ಎಂದು ಹರ್ಷಿಕಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.