ಧಾರವಾಡ: ನಗರದ ನಾರಾಯಣಪುರ ಮುಖ್ಯರಸ್ತೆಯ ಆರ್ನಾ ರೆಸಿಡೆನ್ಸಿಯ ಮೂರನೇ ಅಂತಸ್ತಿನ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಚೀಲಗಳಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ. ಸುಮಾರು ₹ 18 ಕೋಟಿ ಹಣ ಇದೆ ಎಂದು ಹೇಳಲಾಗುತ್ತಿದ್ದು, ಎಣಿಕೆ ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ಸಿಗಲಿದೆ.
ಮನೆಯಲ್ಲಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ತೆರಳಿ ತಪಾಸಣೆ ನಡೆಸಿದರು. ಆಗ ತಿಜೋರಿಯ ಚೀಲಗಳಲ್ಲಿ ಹಣದ ಕಂತೆಗಳು ಸಿಕ್ಕವು. ಆದಾಯ ತೆರಿಗೆ, ವಿಚಕ್ಷಣ ದಳ ಮತ್ತು ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ರಾತ್ರಿ 10ರ ನಂತರವೂ ಪರಿಶೀಲನೆ, ಎಣಿಕೆ ಪ್ರಕ್ರಿಯೆ ನಡೆಯಿತು.
'ಮನೆಯೊಂದರಲ್ಲಿ ಸಿಕ್ಕ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ಎಣಿಸುತ್ತಿದ್ದಾರೆ. ಎಷ್ಟು ಹಣ ಸಿಕ್ಕಿದೆ ಮತ್ತು ಯಾರದ್ದು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ತನಿಖೆ ಬಳಿಕವೇ ಗೊತ್ತಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.