ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಇನ್ನು ₹2ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ತಲಾ ₹1ಲಕ್ಷ ಪರಿಹಾರವು ನಗರಾಭಿವೃದ್ಧಿ ಇಲಾಖೆಯಿಂದ ಸಿಗಲಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಿರುವ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ‘ಮಾರ್ಚ್ 19ರಂದು ಸಂಭವಿಸಿದ ಕಟ್ಟಡ ದುರಂತದಲ್ಲಿ ಮೃತಪಟ್ಟ 19 ಕುಟುಂಬಗಳಿಗೆ ಮಹಾನಗರ ಪಾಲಿಕೆಯು ತಲಾ ₹2ಲಕ್ಷ ಪರಿಹಾರ ನೀಡಲಿದೆ. ಜತೆಗೆ ಗಂಭೀರವಾಗಿ ಗಾಯಗೊಂಡ 17 ಜನರಿಗೆ ತಲಾ ₹1ಲಕ್ಷದಂತೆ ಪರಿಹಾರ ನೀಡಬೇಕು’ ಎಂದು ಆದೇಶಿಸಿದ್ದಾರೆ.
‘ಇದಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯು ಸಾಮಾನ್ಯ ನಿಧಿಯಿಂದ ಭರಿಸಬೇಕು. ಈ ಮೊತ್ತವನ್ನು ಸಂಬಂಧಪಟ್ಟ ಜಾಗದ ಮಾಲೀಕರ ಆಸ್ತಿ ಕರದಲ್ಲಿ ಬಾಕಿ ಇರಿಸಿ ವಸೂಲಿ ಮಾಡಲು ಸರ್ಕಾರ ಸೂಚಿಸಿದೆ’ ಎಂದೂ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ತಾತ್ಕಾಲಿಕ ಪರಿಹಾರವಾಗಿ ಮೃತ ಕುಟುಂಬಗಳಿಗೆ ತಲಾ ₹2ಲಕ್ಷ ಪರಿಹಾರ ನೀಡಿತ್ತು. ದುರಂತದಲ್ಲಿ ಒಟ್ಟು 59 ಜನ ಗಾಯಗೊಂಡಿದ್ದರು. ಇವರಲ್ಲಿ ಶಸ್ತ್ರಚಿಕಿತ್ಸೆ, ಮೂಳೆಮುರಿತದೊಂದಿಗೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಮೊದಲು ಪರಹಾರ ಘೋಷಿಸಿರಲಿಲ್ಲ. ಈಗ ಪಾಲಿಕೆವತಿಯಿಂದ ಅವರಿಗೂ ಪರಿಹಾರ ಸಿಗುತ್ತಿರುವುದು ಆ ಕುಟುಂಬಗಳಿಗೆ ನೆಮ್ಮದಿ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.