ADVERTISEMENT

ಧಾರವಾಡ ಜಿಲ್ಲೆಯಲ್ಲಿ 3,046 ನಾಯಿಕಡಿತ ಪ್ರಕರಣ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 14:10 IST
Last Updated 7 ಅಕ್ಟೋಬರ್ 2024, 14:10 IST
ದಿವ್ಯಪ್ರಭು
ದಿವ್ಯಪ್ರಭು   

ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈವರೆಗೆ 3,046 ನಾಯಿಕಡಿತ ಪ್ರಕರಣಗಳು ದಾಖಲಾಗಿದೆ. ರೇಬಿಸ್‌ ನಿರೋಧಕ ಲಸಿಕೆ ಕಾರ್ಯಕ್ರಮ ಹೆಚ್ಚು ಹಮ್ಮಿಕೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೇಬಿಸ್ ಸಾವು ಸಂಭವಿಸಿಲ್ಲ.ರೇಬಿಸ್‌ ಲಸಿಕೆ ಹಾಕಿಸುವಂತೆ ಅಧಿಕಾರಿಗಳು ಜಾಗೃತಿ ಆಂದೋಲನ ಆಯೋಜಿಸಬೇಕು. ಧಾರವಾಡ ಜಿಲ್ಲೆಯನ್ನು ರೇಬಿಸ್ ಮುಕ್ತವಾಗಿಸಲು ಶ್ರಮಿಸಬೇಕು ಎಂದು ತಿಳಿಸಿದರು.

20 ಗ್ರಾಮ ತಂಬಾಕು ಮುಕ್ತ ಗುರಿ: ಜಿಲ್ಲೆಯಾದ್ಯಂತ 60 ದಿನಗಳವರೆಗೆ ತಂಬಾಕು ಮುಕ್ತ ಯುವ ಅಭಿಯಾನ ಆಚರಿಸಲಾಗುವುದು. ಶಾಲೆ–ಕಾಲೇಜುಗಳು, 20 ಗ್ರಾಮಗಳನ್ನು ಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಶಾಲೆ ಕಾಲೇಜುಗಳಲ್ಲಿ ‘ತಂಬಾಕು ಮುಕ್ತ ಶಾಲೆ’ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ತಂಬಾಕು ಮುಕ್ತವಾಗಿಸಲು ಯೋಜಿಸಿರುವ 20 ಗ್ರಾಮಗಳಲ್ಲಿ ಸಭೆ ನಡೆಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ADVERTISEMENT

ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ಯುವಜನರು ತಂಬಾಕು ಉತ್ಪನ್ನಸೇವನೆ ಗೀಳು ರೂಢಿಸಿಕೊಳ್ಳದಂತೆ ನಗರಗಳಲ್ಲಿ, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಆರ್‌ಸಿಎಚ್‌ ಅಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪರಶುರಾಮ ಎಸ್.ಕೆ, ಪಶುಸಂಗೋಪನೆ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ, ಅಬಕಾರಿ ಅಧಿಕಾರಿ ರಮೇಶ ಕುಮಾರ.ಎಚ್ ಪಾಲ್ಗೊಂಡಿದ್ದರು.

Cut-off box - ತನಿಖಾ ದಾಳಿ ಹೆಚ್ಚಳಕ್ಕೆ ಸೂಚನೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದವರು ತನಿಖಾ ದಾಳಿ ಹೆಚ್ಚು ನಡೆಸಬೇಕು. ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಬೇಕು ಎಂದು ದಿವ್ಯಪ್ರಭು ಸೂಚನೆ ನೀಡಿದರು. ತಂಬಾಕು ಉತ್ಪನ್ನ ಮಾರಾಟ ಅಂಗಡಿಯವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು. ಕೆಲವೆಡೆ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಯುತ್ತಿವೆ ಎಂದು ಆರೋಗ್ಯ ಅಧಿಕಾರಿ ಜಿಲ್ಲಾಧಿಕಾರಿಗೆ ತಿಳಿಸಿದರು. ಪೊಲೀಸರ ಜೊತೆಗೂಡಿ ಆರೋಗ್ಯ ಇಲಾಖೆ ನೌಕರರು ಅಬಕಾರಿ ನೌಕರರು ಕಾರ್ಯಾಚರಣೆ ನಡೆ‌ಸಬೇಕು. ಬಾರ್ ರೆಸ್ಟೊರೆಂಟ್‌ಗಳಲ್ಲಿ ಕೆಲಸಕ್ಕೆ ಬಾಲಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದರೆ ಪರವಾನಗಿ ರದ್ದುಗೊಳಿಸಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.