ಹುಬ್ಬಳ್ಳಿ: ‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರಿಂದ ಅವರು ಯಾವುದೇ ಸರ್ಕಾರಿ ಆದೇಶಗಳಿಗೆ, ಪತ್ರಗಳಿಗೆ ಸಹಿ ಹಾಕಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ದಸರಾ ಪವಿತ್ರ ಆಚರಣೆ. ಅದರ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಬಾರದು. ಈವರೆಗೂ ರಾಜೀನಾಮೆ ನೀಡದ ಅವರು ದಪ್ಪ ಚರ್ಮದವರು’ ಎಂದು ಟೀಕಿಸಿದರು.
‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಇದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ. ರಾಜ್ಯದಲ್ಲಿ ಈ ಸರ್ಕಾರ ಶಾಶ್ವತವಾಗಿ ಇರುವುದಿಲ್ಲ. ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿ’ ಎಂದು ಜೋಶಿ ಎಚ್ಚರಿಸಿದರು.
‘ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂತೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಅವರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.