ADVERTISEMENT

ದೇಶದಾದ್ಯಂತ ಜಾತಿಗಣತಿ ನಡೆಯಲಿ: ‘ಮುಖ್ಯಮಂತ್ರಿ ಚಂದ್ರು‘ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 18:43 IST
Last Updated 7 ಡಿಸೆಂಬರ್ 2023, 18:43 IST
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು   

ಹುಬ್ಬಳ್ಳಿ: ‘ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶದಾದ್ಯಂತ ಜಾತಿಗಣತಿ ನಡೆಸಬೇಕು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದರು.

‘ಇಷ್ಟು ವರ್ಷ ಜನಗಣತಿ ಆಧರಿಸಿ ವಿವಿಧ ಜಾತಿಯವರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸರ್ವರಿಗೂ ಸೌಲಭ್ಯ ಸಿಗಲು ಜಾತಿಗಣತಿ ಅವಶ್ಯ. ರಾಜ್ಯದಲ್ಲಿ ಕಾಂತರಾಜ ಅವರ ನೇತೃತ್ವದಲ್ಲಿ ನಡೆದ ಜಾತಿಗಣತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಬೇಕು. ಸದನದ ಮುಂದಿಟ್ಟು ಅದು ವೈಜ್ಞಾನಿಕವೇ ಅಥವಾ ಅಲ್ಲವೇ ಎಂಬುದನ್ನು ಚರ್ಚಿಸಬೇಕು. ವೈಜ್ಞಾನಿಕವಾಗಿದ್ದರೆ ಅದರ ಅನುಸಾರ ಮೀಸಲಾತಿ, ಒಳ ಮೀಸಲಾತಿಯನ್ನೂ ಕಲ್ಪಿಸಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಹೆಗಡೇವಾರ್‌ ಸ್ಮಾರಕದೊಳಗೆ ಬಿಡದಿರುವ ಘಟನೆ ಜಾತಿ ಕಾರಣಕ್ಕೇ ನಡೆದಿದ್ದರೆ ಖಂಡನೀಯ. ಆರ್‌ಎಸ್ಎಸ್ ಇದಕ್ಕೆ ತಲೆಬಾಗಬೇಕು. ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರವಿಡಲಾಗುತ್ತಿತ್ತು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.