ADVERTISEMENT

ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಕೊಲೆ: ಆರೋಪಿ ಫಯಾಜ್‌ ಬಂಧನ

ಬಿವಿಬಿ ಕಾಲೇಜು ಆವರಣದಲ್ಲಿ ಹಾಡುಹಗಲೆ ನಡೆದ ಘಟನೆ, ಕಾಲೇಜು ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 20:48 IST
Last Updated 18 ಏಪ್ರಿಲ್ 2024, 20:48 IST
<div class="paragraphs"><p>ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ತುರ್ತು ಘಟಕದ ವಿಭಾಗದಲ್ಲಿ ನೇಹಾ ಅವರ ತಾಯಿಯನ್ನು ಸಂಬಂಧಿಕರು ಸಂತೈಸುತ್ತಿರುವುದು</p></div>

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ತುರ್ತು ಘಟಕದ ವಿಭಾಗದಲ್ಲಿ ನೇಹಾ ಅವರ ತಾಯಿಯನ್ನು ಸಂಬಂಧಿಕರು ಸಂತೈಸುತ್ತಿರುವುದು

   

ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಸಂಜೆ ಸಹಪಾಠಿಯೊಬ್ಬ, ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

‘ನೇಹಾ ಹಿರೇಮಠ (25) ಕೊಲೆಯಾದವರು. ಫಯಾಜ್‌ (27) ಕೊಲೆ ಆರೋಪಿ. ಇಬ್ಬರೂ ಕಾಲೇಜಿನ ಎಂಸಿಎ ವಿಭಾಗದ ವಿದ್ಯಾರ್ಥಿಗಳು. ಆರೋಪಿಯನ್ನು ಬಂಧಿಸಲಾಗಿದ್ದು, ಆತ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ನಿವಾಸಿ. ಕೆಲ ತಿಂಗಳಿನಿಂದ ಕಾಲೇಜಿಗೆ ಗೈರಾಗಿದ್ದ’ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ ಹಿರೇಮಠ ಮತ್ತು ಗೀತಾ ಹಿರೇಮಠ ಅವರ ಪುತ್ರಿ ನೇಹಾ. ತನ್ನನ್ನು ಪ್ರೀತಿಸುವಂತೆ ನೇಹಾಗೆ ಫಯಾಜ್ ಹಲವು ದಿನಗಳಿಂದ ಪೀಡಿಸುತ್ತಿದ್ದ. ನಿರಾಕರಿಸಿದ ಕಾರಣ ಕೋಪಗೊಂಡ ಆತ ಗುರುವಾರ ಸಂಜೆ ಕೃತ್ಯವೆಸಗಿದ. ನೇಹಾ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ, ಕುತ್ತಿಗೆಗೆ ಹಲವು ಬಾರಿ ಇರಿದ. ಅವರನ್ನು ತಕ್ಷಣವೇ ವಿದ್ಯಾರ್ಥಿಗಳು ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಫಯಾಜ್‌ನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ನೇಹಾ, ತಂದೆ– ತಾಯಿ ಗಮನಕ್ಕೆ ತಂದಿದ್ದರು. ಪುತ್ರಿಯ ತಂಟೆಗೆ ಬಾರದಂತೆ ತಂದೆಯವರು ಫಯಾಜ್‌ಗೆ ಎಚ್ಚರಿಕೆ ನೀಡಿದ್ದರು’ ಎಂದು ಅವರು ತಿಳಿಸಿದ್ದಾರೆ.

ಕಿಮ್ಸ್‌ ಆಸ್ಪತ್ರೆಯಲ್ಲಿ ನೇಹಾ ಮೃತದೇಹ ಕಂಡು ತಾಯಿ ಗೀತಾ ಹಿರೇಮಠ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

‘ನಮ್ಮ ಮಗಳು ನೇಹಾ ಬಹಳ ಸಂಪನ್ನೆ. ಯಾರೊಂದಿಗೆ ಗಲಾಟೆ ಮಾಡಿದವಳಲ್ಲ. ಬೆಳಿಗ್ಗೆ ನಾನೇ ಕಾಲೇಜಿಗೆ ಕಳುಹಿಸಿದ್ದೆ. ಕಾಲೇಜು ಮುಗಿಯುತ್ತಿದ್ದಂತೆ ನನಗೆ ಫೋನ್‌ ಮಾಡಿ, ಅಮ್ಮ ಕಾಲೇಜು ಮುಗಿಯಿತು. ಬರುತ್ತಿರುವೆ ಎಂದು ಹೇಳಿ ಹತ್ತು ನಿಮಿಷವಾಗಿರಲಿಲ್ಲ. ಅಷ್ಟರಲ್ಲಿ ಆಕೆಯ ಸಾವಿನ ಸುದ್ದಿ ಬಂತು’ ಎಂದು ತಾಯಿ ಗೀತಾ ಹಿರೇಮಠ ಮತ್ತು ಚಿಕ್ಕಮ್ಮ ಶೈಲಶ್ರೀ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.

‘ನೇಹಾಗೆ ಕೆಲ ತಿಂಗಳ ಹಿಂದೆಯಷ್ಟೆ ಕಾಲೇಜಿಗೆ ಸೇರಿಸಿದ್ದೆವು. ಆಕೆಗೆ ಆರೋಪಿಯಿಂದ ತೊಂದರೆ ಆಗುತ್ತಿರುವುದು ಗೊತ್ತಾಗಿತ್ತು. ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು’ ಎಂದು ನೇಹಾ  ಚಿಕ್ಕಪ್ಪ ಶಿವಕುಮಾರ್ ಒತ್ತಾಯಿಸಿದರು.  

ನೇಹಾ ಹಿರೇಮಠ್
ಬಿವಿಬಿ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು
ಬಿವಿಬಿ ಕಾಲೇಜು ಬಳಿ ಪೊಲೀಸರನ್ನು ನಿಯೋಜನೆ ಮಾಡಿರುವುದು 

ಪ್ರೀತಿ ಮಾಡಲು ನಿರಾಕರಿಸಿದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿ ಫಯಾಜ್ ಹೇಳಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಿ ಇನ್ನಷ್ಟು ತನಿಖೆ ನಡೆಸಬೇಕಿದೆ.

– ರೇಣುಕಾ ಸುಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ

ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿದ್ಯಾರ್ಥಿನಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.  ‘ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ. ಲವ್‌ ಜಿಹಾದ್‌ ಹೆಸರಿನಲ್ಲಿ ಕೆಲ ಮುಸ್ಲಿಂ ಯುವಕರು ವಿದ್ಯಾರ್ಥಿನಿಯರಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಇದಕ್ಕೆ ಕಡಿವಾಣ ಇಲ್ಲವಾಗಿದೆ. ನೇಹಾ ಅವರನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಎಬಿವಿಪಿ ಮುಖಂಡ ಮಣಿಕಂಠ ಆಗ್ರಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.