ಕುಂದಗೋಳ ಅಂದರೆ ಸಂಗೀತ. ಸಂಗೀತವೆಂದರೆ ಇಲ್ಲಿನ ನಾಡಗೀರ ವಾಡೆ. ವಾಡೆದಾಗಿನ ಸಂಗೀತ ಕೇಳೋದಂದ್ರ ಸಂಗೀತ ಪ್ರಿಯರಿಗೆ ಎಲ್ಲಿಲ್ಲದ ಸಂತಸ. ರಾಷ್ಟ್ರದಲ್ಲಿಯೇ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ಖ್ಯಾತಿ ಇಲ್ಲಿನ ಶ್ರೀಮಂತ ನಾನಾಸಾಹೇಬ ನಾಡಗೀರ ಅವರಿಗೆ ಸಲ್ಲುತ್ತದೆ.
ವಾಡೆಯ ಮಾಲೀಕರಾಗಿದ್ದ ಶ್ರೀಮಂತ ನಾನಾಸಾಹೇಬರಿಗೆ ಸಂಗೀತ ಕಲಿಯಲು ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಸಂಗೀತ ಕಲಿಯಬೇಕೆನ್ನುವವರಿಗೆ ಮಾತ್ರ ಅಗತ್ಯ ಸಲಕರಣೆಗಳನ್ನು ಪೂರೈಸಿ ಆಶ್ರಯ ಕೊಟ್ಟು ಸಂಗೀತ ಕಲಿಸಿದವರು. ಇಲ್ಲಿನ ಸಂಗೀತದ ಶಿಕ್ಷಣದಿಂದ ರಾಮಭಾವು ಕುಂದಗೋಳಕರ ಅವರನ್ನು ಹಿಂದೂಸ್ತಾನಿ ಸಂಗೀತ ಲೋಕದ ಅಪ್ರತಿಮ ಸಂಗೀತಗಾರ ಸವಾಯಿ ಗಂಧರ್ವರನ್ನಾಗಿ ಮಾಡಿತು. ಇವರ ಜೊತೆಗೆ ಉಸ್ತಾದ್ ಫಿರೋಜ್ ದಸ್ತೂರ, ಭಾರತರತ್ನ ಪಂಡಿತ ಭೀಮಸೇನ ಜೋಶಿ, ಗಾನವಿದುಷಿ ಡಾ.ಗಂಗೂಬಾಯಿ ಹಾನಗಲ್ ಅವರನ್ನು ಬೆಳೆಸಿ ದೇಶದ ಸಂಗೀತ ಲೋಕಕ್ಕೆ ಅರ್ಪಿಸಿದ ಕೀರ್ತಿ ಇಲ್ಲಿನ ನಾಡಗೀರ ವಾಡೆಗೆ ಸಲ್ಲುತ್ತದೆ.
ನಾನಾಸಾಹೇಬ ನಾಡಗೀರ ಅವರದು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಆಗಿನ ಕಾಲದಲ್ಲಿ ಆದರಾತಿಥ್ಯಕ್ಕೆ ಹೆಸರಾದ ವಾಡೆ ಪ್ರತಿಷ್ಠಿತವಾಗಿತ್ತು. ಸಂಗೀತ ಕ್ಷೇತ್ರದ ದಿಗ್ಗಜರಾದ ಕಿರಾಣಾ ಘರಾಣೆಯ ಉಸ್ತಾದ್ ಅಬ್ದುಲ್ ಕರೀಮ್‌ಖಾನರು ಮುಂಬೈ, ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದೇ ಭಾಗದಲ್ಲಿ ಸಂಗೀತ ಕಾರ್ಯಕ್ರಮ ಕೊಡಲು ಬಂದಾಗ ಇಲ್ಲಿನ ವಾಡೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ವಾಡೆಯಲ್ಲಿ ಕಾರಣಿಕರಾಗಿ ಸೇವೆ ಮಾಡುತ್ತಿದ್ದ ರಾಮಭಾವು ಕುಂದಗೋಳಕರ(ಸವಾಯಿ ಗಂಧರ್ವ) ಸಂಗೀತದ ಚೀಜ್‌ವೊಂದನ್ನು ಪ್ರಸ್ತುತಪಡಿಸುವಾಗಗಮನಿಸಿದ ಖಾನ್ ಸಾಹೇಬರು ರಾಮಭಾವು ಅವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ,ಹಿಂದೂಸ್ತಾನಿ ಸಂಗೀತದ ಪಾಠಹೇಳಿಕೊಟ್ಟರು.
ರಾಮಭಾವು ಗುರುಗಳ ಕೈಯಲ್ಲಿ ಅಡಿ ಹಾಕಿದ ಮಾವಿನಂತೆ ಪಳಗಿ ಮಹಾರಾಷ್ಟ್ರದ ಸಂಗೀತ ಕಛೇರಿಯೊಂದರಲ್ಲಿ ತಮ್ಮ ಉತ್ತಮ ಹಾಡುಗಾರಿಕೆ ಪ್ರದರ್ಶಿಸಿ ‘ಸವಾಯಿ ಗಂಧರ್ವ’ ಎಂಬ ಬಿರುದು ಪಡೆದುಕೊಂಡರು. 1952ರಲ್ಲಿ ಗಂಧರ್ವರು ಸ್ವರ್ಗಸ್ಥರಾದ ನಂತರ ಆ ದಿನದಂದು ಗುರುಸ್ಮರಣೆಯ ಸ್ಮೃತಿ ಸಂಗೀತ ಕಾರ್ಯಕ್ರಮ ಆರಂಭಿಸಿದ ಶ್ರೇಯಸ್ಸು ನಾನಾಸಾಹೇಬ ನಾಡಗೀರ ಅವರದು. ಸತತ 25 ವರ್ಷಗಳ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ಸಂಗೀತೋತ್ಸವ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬಂದರು.
ಸಂಗೀತೋತ್ಸವದ ಮೊದಲ ದಿನದ ಕೊನೆಯ ಕಾರ್ಯಕ್ರಮ ಗಂಗೂಬಾಯಿ ಹಾನಗಲ್ ಅವರದ್ದಾದರೆ, ಎರಡನೇ ದಿನದ ಕಾರ್ಯಕ್ರಮ ಪಂಡಿತ ಭೀಮಸೇನ್ ಜೋಶಿಯವರ ಹಾಡಿನೊಂದಿಗೆ ಸಂಪನ್ನವಾಗುತ್ತಿತ್ತು. ಹೀಗೆ ನಡೆದುಕೊಂಡ ಬಂದ ಕುಂದಗೋಳ ವಾಡೆಯಲ್ಲಿನ ಸಂಗೀತ ಕಾರ್ಯಕ್ರಮದಲ್ಲಿ ಬಂದು ಹಾಡುವ ಅವಕಾಶಕ್ಕಾಗಿ ಖ್ಯಾತ ಸಂಗೀತಗಾರರು ಚಾತಕ ಪಕ್ಷಿಯಂತೆ ಕಾಯುತಲಿದ್ದರು. ಅವಕಾಶ ಸಿಕ್ಕಾಗ ಉತ್ಸಾಹದಿಂದಲೇ ಬಂದು ಮನತುಂಬಿ ಹಾಡಿ ವಿನೂತನ ಅನುಭವವನ್ನು ಪಡೆದುಕೊಳ್ಳುತ್ತಿದ್ದರು. ವಾಡೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುವುದೇ ನಮ್ಮಪುಣ್ಯ ಎಂದು ಅನೇಕ ಸಂಗೀತಗಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
2000ರಲ್ಲಿ ಸವಾಯಿ ಗಂಧರ್ವ ವಿಶ್ವಸ್ಥ ಸಮಿತಿ ಹಾಗೂ ನಾಡಗೀರ ವಾಡೆಯ ಸಮಿತಿ ಸದಸ್ಯರಲ್ಲಿ ಮನಸ್ತಾಪ ಉಂಟಾಗಿದ್ದರಿಂದ ವಿಶ್ವಸ್ಥ ಸಮಿತಿಯವರು ವಾಡೆ ಬಿಟ್ಟು ಹೊರಗೆ ಸಂಗೀತ ಕಾರ್ಯಕ್ರಮ ಮಾಡಲು ಆರಂಭಿಸಿದರು. ಇದರಿಂದ ವಾಡೆಯ ಮಾಲೀಕರು 2001ರಿಂದ ನಾಡಗೀರ ಸ್ಮೃತಿ ಸಂಗೀತೋತ್ಸವ ಪ್ರತಿಷ್ಠಾನ ಸಮಿತಿ ಹುಟ್ಟು ಹಾಕಿ ಅಲ್ಲಿಂದ ಇಲ್ಲಿಯವರಿಗೂ ನಿರಂತರವಾಗಿ ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. 19 ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಂಗೀತ ಗಾಯಕರು ವಾಡೆಗೆ ಬಂದು ತಮ್ಮ ಗುರುಗಳ ಸ್ಮರಣಾರ್ಥ ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಸಂಗೀತಪ್ರಿಯರಿಗೆ ಸಂಗೀತದ ರಸದೌತಣ ನೀಡುವುದೇ ಇಲ್ಲಿನ ವೈಶಿಷ್ಟ್ಯವಾಗಿದೆ.
ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ...
ಸ್ಮೃತಿ ಪ್ರತಿಷ್ಠಾನದಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ಮಂಗಳವಾರ (ಸೆ.24) ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಸಂಗೀತ ಗಾಯಕರಾದ ಪಂಡಿತ ಗಣಪತಿ ಭಟ್ ಹಾಸಣಗಿ, ಧಾರವಾಡದ ಎಂ.ವೆಂಕಟೇಶಕುಮಾರ, ವಿಜಯಕುಮಾರ ಪಾಟೀಲ, ಹೊನ್ನಾವರದ ಡಾ.ಅಶೋಕ ಹುಗ್ಗಣ್ಣವರ, ಪುಣೆಯ ಶೌನ ಅಭಿಷೇಕಿ, ಹುಬ್ಬಳ್ಳಿಯ ಕೃಷ್ಣೇಂದ್ರ ವಾಡಿಕರ, ಬೆಂಗಳೂರಿನ ಪದ್ಮನಿ ಓಕ್, ರಾಧಿಕಾ ಹೆಗಡೆ (ಗಾಯನ), ಲಕ್ಷ್ಮೇಶ್ವರದ ಕೃಷ್ಣಾ ಕ್ಷತ್ರೀಯ(ಶಹನಾಯಿ), ವೀಣಾ ಮಠ (ವಾಯೊಲಿನ್), ಅಂಗದ ದೇಸಾಯಿ, ಕೇಶವ ಜೋಶಿ, ಗೋಪಾಲ ಗುಡಿಬಂಡಿ, ಅಲ್ಲಮಪ್ರಭು ಕಡಕೋಳ, ಗಣೇಶ ಭಾಗವತ್, ಶ್ರೀಧರ ಮಾಂಡ್ರೆ(ತಬಲಾ), ಬೆಂಗಳೂರಿನ ರವೀಂದ್ರ ಯಾವಗಲ್(ತಬಲಾ ಸೋಲೊ), ಪ್ರಕಾಶ ಹೆಗಡೆ(ಕೊಳಲು), ಸತೀಶ ಭಟ್, ಯೋಗೇಶ ರಾಮದಾಸ, ಮುಕುಂದ ಘೋರೆ, ಸಾರಂಗ ಕುಲಕರ್ಣಿ, ಚಂದ್ರಶೇಖರ ಹಿರೇಮಠ, ಪರಮೇಶ್ವರ ಯಲವಿಗಿ(ಹಾರ್ಮೋನಿಯಂ) ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.