ADVERTISEMENT

ಹುಬ್ಬಳ್ಳಿ: ಗಣೇಶ ಮೂರ್ತಿಗೆ ಮುಸ್ಲಿಮರ ದೇಣಿಗೆ

ಸುಷ್ಮಾ ಸವಸುದ್ದಿ
Published 7 ಸೆಪ್ಟೆಂಬರ್ 2024, 7:57 IST
Last Updated 7 ಸೆಪ್ಟೆಂಬರ್ 2024, 7:57 IST
<div class="paragraphs"><p>ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೊನಿಯಲ್ಲಿ ಪ್ರತಿಷ್ಠಾಪನೆ ಆಗಲಿರುವ ಗಣೇಶ ಮೂರ್ತಿ</p></div>

ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೊನಿಯಲ್ಲಿ ಪ್ರತಿಷ್ಠಾಪನೆ ಆಗಲಿರುವ ಗಣೇಶ ಮೂರ್ತಿ

   

- ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನಗರದಲ್ಲಿ ಗಣೇಶ ಚತುರ್ಥಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸುವುದರ ಜೊತೆಗೆ ಕೋಮು ಸೌಹಾರ್ದದ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಸ್ಲಿಮರು ಕೈಜೋಡಿಸಿದ್ದಾರೆ.

ADVERTISEMENT

ನಗರದ 51ನೇ ವಾರ್ಡ್‌ನ ಪ್ರಿಯದರ್ಶಿನಿ ಕಾಲೊನಿಯ ಚವ್ಹಾಣ್‌ ಪ್ಲಾಟ್‌ನಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗೆ ತಗಲುವ ಪೂರ್ಣ ವೆಚ್ಚವನ್ನು ಇಲ್ಲಿನ ನಿವಾಸಿ, ಉದ್ಯಮಿ ಶಹಾಬುದ್ದೀನ್ ಸಾಬ್ ತಹಶೀಲ್ದಾರ್ ಭರಿಸಲಿದ್ದಾರೆ.

‘ಪ್ರತಿ ವರ್ಷ ಗಣೇಶ ಚತುರ್ಥಿಗೆ ಎಲ್ಲ ಧರ್ಮದವರೂ ದೇಣಿಗೆ ನೀಡುತ್ತೇವೆ. ಕಳೆದ ವರ್ಷ ₹10 ಸಾವಿರ ದೇಣಿಗೆ ನೀಡಿದ್ದೆ. ಈ ಬಾರಿ ಗಣೇಶ ಮೂರ್ತಿಗೆ ತಗಲುವ ವೆಚ್ಚವನ್ನು ನಾನೇ ಕೊಡುತ್ತಿದ್ದೇನೆ. ಎಲ್ಲ ಹಬ್ಬಗಳನ್ನೂ ಎಲ್ಲರೂ ಒಟ್ಟಾಗಿ ಆಚರಿಸುತ್ತೇವೆ’ ಎಂದು ಶಹಾಬುದ್ದೀನ್ ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾತಿ, ಧರ್ಮಕ್ಕೆ ಸೀಮಿತವಾಗದೇ ವಿಶಾಲ ಮನೋಭಾದಿಂದ ಎಲ್ಲರೂ ಜೊತೆಗೂಡಿ ಹಬ್ಬವನ್ನು ಆಚರಿಸಿದರೆ, ಎಲ್ಲೆಡೆ ಸಂತಸ ಮೂಡುತ್ತದೆ. ಸೌಹಾರ್ದದ ಭಾವ ಗಟ್ಟಿಯಾಗುತ್ತದೆ’ ಎಂದರು.

ಅನ್ನಸಂತರ್ಪಣೆಯ ಜವಾಬ್ದಾರಿ ಹೊತ್ತಿರುವ ನಿವೃತ್ತ ಎಎಸ್ಐ ಸುಧಾನ್ ನದಾಫ್, ‘15 ವರ್ಷದಿಂದ ಇದೇ ಕಾಲೊನಿಯಲ್ಲಿ ವಾಸವಿದ್ದೇನೆ. ಎಂದಿಗೂ ಜಾತಿ, ಧರ್ಮಗಳ ಭೇದ ಅಡ್ಡಿ ಬಂದಿಲ್ಲ. ಎಲ್ಲರೂ ಒಟ್ಟಾಗಿ ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ದೀಪಾವಳಿ, ಮೊಹರಂ, ಈದ್ ಮಿಲಾದ್, ಕ್ರಿಸ್‌ಮಸ್ ಆಚರಿಸುತ್ತೇವೆ’ ಎಂದರು.

ಪ್ರತಿ ವರ್ಷ ಎಲ್ಲರೂ ಒಟ್ಟಾಗಿ ಭಾವೈಕ್ಯದಿಂದ ಗಣೇಶ ಚತುರ್ಥಿ ಆಚರಿಸುತ್ತೇವೆ. ಅನ್ನ ಸಂತರ್ಪಣೆ ಆಶೀರ್ವಚನ ಸೇರಿ ಧಾರ್ಮಿಕ ಸಮಾರಂಭದಲ್ಲೂ ಎಲ್ಲ ಧರ್ಮೀಯರು ಪಾಲ್ಗೊಳ್ಳುತ್ತಾರೆ
ಸಂದೀಲಕುಮಾರ ಎಸ್. ಪಾಲಿಕೆ ಸದಸ್ಯ
ನಮ್ಮ ಕಾಲೊನಿಯಲ್ಲಿ ಪ್ರತಿಷ್ಠಾಪಿಸಲಿರುವ ಗಣೇಶ ಮೂರ್ತಿ ಈಗಾಗಲೇ ಸಿದ್ಧವಾಗಿದ್ದು ಶನಿವಾರ ಎಲ್ಲ ಧರ್ಮದವರೂ ಸೇರಿ ಮೆರವಣಿಗೆ ಮೂಲಕ ಮೂರ್ತಿ ತಂದು ಪ್ರತಿಷ್ಠಾಪಿಸುತ್ತೇವೆ.
ಶಹಾಬುದ್ದೀನ್ ಸಾಬ್ ತಹಶೀಲ್ದಾರ್ ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.