ADVERTISEMENT

ಆಟೊರಿಕ್ಷಾ: ಈಡೇರದ ಬೇಡಿಕೆ–ಪಾಲನೆಯಾಗದ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 4:40 IST
Last Updated 20 ನವೆಂಬರ್ 2023, 4:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟೊರಿಕ್ಷಾಗಳು ಸಂಚರಿಸುತ್ತವೆ. ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ಸೇವೆಯಲ್ಲಿ ಸೇವೆ ನೀಡಲು ಆಟೊರಿಕ್ಷಾ ಚಾಲಕರು ಪ್ರಯತ್ನಿಸುತ್ತಾರೆ. ಆದರೆ, ಪಾಲನೆಯಾಗದ ನಿಯಮ, ಈಡೇರದ ಬೇಡಿಕೆ, ಬೆಲೆ ಏರಿಕೆ, ಅನಾರೋಗ್ಯಕಾರಿ ಪೈಪೋಟಿ, ವೈಷಮ್ಯ ಎಲ್ಲವೂ ಆಟೊರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಕಥೆ–ವ್ಯಥೆ ಹೇಳುತ್ತವೆ.

ಅವಳಿನಗರದಲ್ಲಿ ಬರೋಬ್ಬರಿ 25 ಸಾವಿರ ಆಟೊಗಳಿವೆ. ಅವುಗಳಲ್ಲಿ 15 ಸಾವಿರ ಹುಬ್ಬಳ್ಳಿಯಲ್ಲಿ ಮತ್ತು 10 ಸಾವಿರ ಧಾರವಾಡದಲ್ಲಿ ಸಂಚರಿಸುತ್ತವೆ. ಅವುಗಳಲ್ಲಿ ಸುಮಾರು 7 ಸಾವಿರ ಆಟೊರಿಕ್ಷಾಗಳು ಕಾನೂನುಬಾಹಿರವಾಗಿ ಸಂಚರಿಸುತ್ತವೆ. ಪ್ರಾದೇಶಿಕ ಸಾರಿಗೆ ಕಚೇರಿಯವರು (ಆರ್‌ಟಿಒ) ಮತ್ತು ಪೊಲೀಸರು ಆಗಾಗ್ಗೆ ಕಾರ್ಯಾಚರಣೆ ನಡೆಸುವುದು ಹೊರತುಪಡಿಸಿದರೆ, ನಿರೀಕ್ಷಿತ ಬದಲಾವಣೆಗಳು ಆಗಿಲ್ಲ.

ADVERTISEMENT

ಎರಡು ದಶಕಗಳ ಹಿಂದೆ ಆಟೊ ಚಾಲಕರ ಸಂಘಟನೆ ಒಗ್ಗಟ್ಟಿಗೆ ಹೆಸರಾಗಿತ್ತು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು–ನುಡಿ ಹೆಸರಲ್ಲಿ ವಿಜೃಂಭಣೆಯ ಕಾರ್ಯಕ್ರಮ ನಡೆಯುತ್ತಿದ್ದವು. ಇತ್ತೀಚೆಗೆ ಸಂಘಟನೆಗಳ ನಡುವೆ ಬಿರುಕು ಬಿಟ್ಟು, ವೈಯಕ್ತಿಕ ಪ್ರತಿಷ್ಠೆಗಳೇ ಮುನ್ನೆಲೆಗೆ ಬಂದಿವೆ. ಕೆಲವು ಆಟೊ ಚಾಲಕರು ಅಪರಾಧ ಕೃತ್ಯದಲ್ಲಿ ತೊಡಗಿದ್ದು, ಇತರ ಚಾಲಕರಿಗೂ ಕಪ್ಪು ಚುಕ್ಕೆ ತಂದಿದೆ.

‘ನಿಜವಾದ ಆಟೊ ಚಾಲಕರು ಬೆಳಿಗ್ಗೆಯಿಂದ ರಾತ್ರಿವರೆಗೂ ಪ್ರಯಾಣಿಕ ಸ್ನೇಹಿಯಾಗಿ ದುಡಿಯುತ್ತಾರೆ. ಆದರೆ, ರಾತ್ರಿವೇಳೆ ಆಟೊ ಓಡಿಸುವ ಕೆಲವರಲ್ಲಿ ಯಾವ ದಾಖಲೆಗಳು ಇರುವುದಿಲ್ಲ. ಅವರಲ್ಲಿ ಕೆಲವರು ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ರಾತ್ರಿವೇಳೆ ಪ್ರಯಾಣಿಕರಿಂದ ಮೂರು, ನಾಲ್ಕುಪಟ್ಟು ಹಣ ಬಾಡಿಗೆ ಪಡೆಯುವುದೂ ಗಮನಕ್ಕೆ ಬಂದಿದೆ. ಅವರು ನಮ್ಮ ಸಂಘಟನೆಯ ಸದಸ್ಯರಲ್ಲ. ಅಂಥವರಿಂದ ಪ್ರಾಮಾಣಿಕವಾಗಿ ದುಡಿಯುವ ಆಟೊ ಚಾಲಕರಿಗೂ ಕೆಟ್ಟ ಹೆಸರು’ ಎಂದು ಉತ್ತರ ಕರ್ನಾಟಕ ಆಟೊ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದರು.

‘ವರ್ಷಪೂರ್ತಿ ರಸ್ತೆಕಾಮಗಾರಿ, ಗುಂಡಿಬಿದ್ದ ಒಳರಸ್ತೆಗಳಿಂದ ಆಟೊ ಓಡಿಸುವುದು ದೊಡ್ಡ ಸಮಸ್ಯೆ. ಹೊಟ್ಟೆಪಾಡಿಗಾಗಿ ಓಡಿಸಲೇಬೇಕು. ಆಗ, ಆಟೊದ ಒಂದೊಂದೇ ಬಿಡಿಭಾಗಗಳು ಹಾಳಾಗುತ್ತವೆ. ಅದರ ದುರಸ್ತಿಗೆ ಒಮ್ಮೊಮ್ಮೆ ವಾರದ ದುಡಿಮೆಯೂ ಸಾಲದು. ಹೆಚ್ಚಿಗೆ ಬಾಡಿಗೆ ಕೇಳುವಂತಿಲ್ಲ. ಕೇಳದಿದ್ದರೆ ಕುಟುಂಬ ನಿರ್ವಹಣೆ ಆಗದು. ತ್ರಿಶಂಕು ಸ್ಥಿತಿ ನಮ್ಮದಾಗಿದೆ. ಸರ್ಕಾರದಿಂದ ಸಹ ಯಾವ ಸೌಲಭ್ಯವೂ ದೊರೆಯುತ್ತಿಲ್ಲ’ ಎಂದು ಅವರು ಸಂಕಷ್ಟ ತೋಡಿಕೊಂಡರು.

‘ಕೆಲವು ಆಟೊಗಳು ಏಳು–ಎಂಟು ಮಂದಿಗೆ ಹಸ್ತಾಂತರವಾಗಿದೆ. ಅದರ ಮೂಲ ಮಾಲೀಕರು ಯಾರು ಎನ್ನುವುದೇ ಗೊತ್ತಿಲ್ಲ. ಸದ್ಯ ಆಟೊ ಒಡಿಸುವವರ ಹೆಸರಲ್ಲೂ ಅದು ಇಲ್ಲ. ಮಾರಾಟ ಮಾಡಿದ ವ್ಯಕ್ತಿ ಊರು ಬಿಟ್ಟಿರಬಹುದು, ಮೃತಪಟ್ಟಿರಬಹುದು. ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಜವಾಬ್ದಾರರು ಯಾರು? ಆಟೊ ಖರೀದಿಸಿದ ತಕ್ಷಣ ಅದನ್ನು ಹೆಸರಿಗೆ ಮಾಡಿಕೊಳ್ಳಬೇಕು. ವಿಮೆ ಮಾಡಿಸದ ಹಾಗೂ ಮೀಟರ್‌ ಅಳವಡಿಸಿಕೊಳ್ಳದ ಆಟೊಗಳನ್ನು ಸಂಚರಿಸಲು ಅವಕಾಶ ನೀಡಬಾರದು’ ಎಂದು ಗೋಕುಲ ರಸ್ತೆ ಉದ್ಯಮಿ ರಾಮಕುಮಾರ ಸಿಂಧೆ ಆಗ್ರಹಿಸಿದರು.

ಅವಳಿ ನಗರದ ಆಟೊಗಳಿಗೆ ಡಿಜಿಟಲ್‌ ದರ ಮೀಟರ್ ಅಳವಡಿಕೆ ಮಾಡಬೇಕು ಎನ್ನುವುದು ಇಂದು, ನಿನ್ನೆಯ ಯೋಜನೆಯಲ್ಲ. ಹತ್ತು, ಹದಿನೈದು ವರ್ಷಗಳ ಹಿಂದೆಯೇ ಯೋಜನೆ ಸಿದ್ಧಪಡಿಸಲಾಗಿತ್ತು. ಎಂಟು ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ಅವರು, ಅದಕ್ಕೆ ಮತ್ತೆ ಮರುಜೀವ ನೀಡಿದರು. ಮೀಟರ್ ಅಳವಡಿಕೆ ಕಡ್ಡಾಯ ಎಂದು ಆದೇಶಿಸಿ, ಆಟೊ ಚಾಲಕರಿಗೆ ಕಾಲಾವಕಾಶ ನೀಡಿದರು.

ನಂತರ ಮೀಟರ್ ಅಳವಡಿಸಿಕೊಳ್ಳದ ಆಟೊ ವಿರುದ್ಧ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಒಂದಷ್ಟು ಆಟೊಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದರು. ಅವೈಜ್ಞಾನಿಕ ಮೀಟರ್ ದರ, ಮೀಟರ್ ದುರಸ್ತಿ ಸಮಸ್ಯೆ ಕಾರಣ ಮುಂದಿಟ್ಟುಕೊಂಡು ಆಟೊ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜಕೀಯ ಒತ್ತಡವೂ ಅಧಿಕಾರಿಗಳ ಮೇಲೆ ಬಿದ್ದವು. ಪರಿಣಾಮ ದೀಪಾ ಚೋಳನ್ ಅವರ ಆದೇಶ ಅಲ್ಲಿಗೆ ತಟಸ್ಥವಾಯಿತು.

‘ರಹದಾರಿ ಪರವಾನಗಿ ಪಡೆಯದೇ ಓಡಿಸುವ ಆಟೊಗಳ ವಿರುದ್ಧ ಆಗಾಗ ಕಾರ್ಯಾಚರಣೆ ನಡೆಸಿ, ಆಟೊಗಳನ್ನು ವಶಕ್ಕೆ ಪಡೆಯುತ್ತೇವೆ. ಕಡ್ಡಾಯವಾಗಿ ದಾಖಲೆಗಳನ್ನು ಇಟ್ಟುಕೊಂಡೇ ಆಟೊ ಚಲಾಯಿಸಬೇಕು. ದಂಡ ಪಾವತಿಸಿ ಬಿಡಿಸಿಕೊಂಡು ಹೋಗುತ್ತಾರೆ. ಮತ್ತೆ, ಅದೇ ಆಟೊ ರಸ್ತೆಗೆ ಇಳಿಯುತ್ತದೆ. ನಾವು ದಂಡ ಪಾವತಿಸಿಕೊಳ್ಳಬಹುದೇ ಹೊರತು, ಹೆಚ್ಚಿನದೇನೂ ಮಾಡಲು ಸಾಧ್ಯವಿಲ್ಲ' ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಹೇಳಿದರು.

ಹುಬ್ಬಳ್ಳಿ ನಗರದಲ್ಲಿ 150, ಧಾರವಾಡ ನಗರದಲ್ಲಿ 50 ಆಟೊ ನಿಲ್ದಾಣಗಳಿವೆ. ಹುಬ್ಬಳ್ಳಿ ದುರ್ಗದ ಬೈಲ್ ಬಳಿಯಿರುವ ನಿಲ್ದಾಣ ಮಾತ್ರ ಮಾತ್ರ ಪಾಲಿಕೆಯಿಂದ ನಿರ್ಮಿಸಿರುವ ಅಧಿಕೃತ ಆಟೊ ನಿಲ್ದಾಣವಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಗೋಕುಲ ಹೊಸ ಬಸ್‌ ನಿಲ್ದಾಣ ಸೇರಿದಂತೆ ಐದು ಕಡೆ ಆಟೊ ನಿಲ್ದಾಣಗಳ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಒಪ್ಪಿಗೆ ದೊರೆತಿವೆ. ಆದರೆ, ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ. ಸುಸಜ್ಜಿತ ನಿಲ್ದಾಣಕ್ಕಾಗಿ ಚಾಲಕರು ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದರೂ, ಆಳುವ ವರ್ಗದ ಕಿವಿಗೆ ಆ ಧ್ವನಿ ಇನ್ನೂ ಬಿದ್ದಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.