ADVERTISEMENT

ಪ್ರಲ್ಹಾದ ಜೋಶಿಗೆ 2ನೇ ಬಾರಿಗೆ ಒಲಿದ ಸಚಿವ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:25 IST
Last Updated 9 ಜೂನ್ 2024, 16:25 IST

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿರುವ ಪ್ರಲ್ಹಾದ ಜೋಶಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದಿದೆ. ಆ ಮೂಲಕ ಉತ್ತರ ಕರ್ನಾಟಕ ಭಾಗದ ಒಬ್ಬರಿಗೆ ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸ್ಥಾನ ಸಿಕ್ಕಿದಂತಾಗಿದೆ.

ಭಾನುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೋಶಿ ಅವರು ಮತ್ತೊಮ್ಮೆ ಸಚಿವರಾಗಿರುವುದು ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ. ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ಬಿಜೆಪಿ ಸಂಭ್ರಮಿಸಿದರು.

ಕಳೆದ ಬಾರಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಜೋಶಿ ಅವರು ಸಂಸದೀಯ ವ್ಯ‌ವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ನಿ‌ಭಾಯಿಸಿದ್ಧಾರೆ.

ADVERTISEMENT

ಅವರು ಪೆಟ್ರೋಲಿಯಂ ಮ‌ತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ಧಾರೆ. ಲೋಕಸಭೆ ವ್ಯವಹಾರಗಳ ಸಮಿತಿ, ರೈಲ್ವೆ ಸ್ಥಾಯಿ ಸಮಿತಿ ಮತ್ತು ನಗರಾಭಿವೃದ್ಧಿ ಸ‌ಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

2004ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ ಅವರು ಸತತವಾಗಿ ಗೆಲುವು ಸಾಧಿಸಿದ್ಧಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಗೆದ್ದ ಮೊದಲಿಗರಾಗಿದ್ಧಾರೆ.

ಪ್ರಲ್ಹಾದ ಜೋಶಿ ಅವರು ವೆಂಕಟೇಶ ಜೋಶಿ ಮತ್ತು ಮಾಲತಿ ಬಾಯಿ ದಂಪತಿಯ ಪುತ್ರ. ಅವರ ತಂದರೆ ವೆಂಕಟೇಶ ಅವರು ರೈಲ್ವೆಯಲ್ಲಿ ಉದ್ಯೊಗಿಯಾಗಿದ್ದರು. ಜೋಶಿ ಅವರು ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಪೂರೈಸಿದ್ಧಾರೆ. ಬಿ.ಎ ಪದವಿ ಪಡೆದಿದ್ದಾರೆ. ಒಂಬತ್ತನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಟ್ಟಾಳುವಾಗಿದ್ದಾರೆ. ಪತ್ನಿ ಜ್ಯೋತಿ, ಮೂವರು ಪುತ್ರಿಯರು (ಅರ್ಪಿತಾ, ಅನುಷಾ ಮತ್ತು ಅನನ್ಯಾ) ಇದ್ದಾರೆ.

ಜೋಶಿ ಅವರು ಪ್ರಧಾನಿ ಮೋದಿ ಅವರ ಜೊತೆ ಒಡನಾಟ ಹೊಂದಿದ್ಧಾರೆ. ಕ್ಷೇತ್ರದಲ್ಲಿ ಪಕ್ಷದಲ್ಲಿ ಹಿಡಿತ ಹೊಂದಿದ್ದಾರೆ. ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.

61 ವರ್ಷ ವಯಸ್ಸಿನ ಪ್ರಲ್ಹಾದ ಜೋಶಿ ಅವರು ಸಚಿವರಾಗಿ ಮತ್ತೊಂದು ‘ಇನ್ನಿಂಗ್ಸ್‌‘ ಆರಂಭಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಜನರಲ್ಲಿ ಮತ್ತಷ್ಟು ನಿರೀಕ್ಷೆಗಳು ಗರಿಗೆದರಿವೆ. ಜೋಶಿ ಅವರಿಗೆ ಕ್ಷೇತ್ರದ ಆಳ–ಅಗಲ, ಸಮಸ್ಯೆಗಳು ಅರಿವು ಇದೆ. ಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆ ಕಾರ್ಯಗತಗೊಳಿಸಲು ಕ್ರಮವಹಿಸುವುದು ಮೊದಲಾದ ವಿಚಾರಗಳು ಅವರ ಮಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.