ADVERTISEMENT

ಜೀವದ ಗ್ಯಾರಂಟಿ ನೀಡಿದ್ದ ನರೇಂದ್ರ ಮೋದಿ: ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:12 IST
Last Updated 10 ಡಿಸೆಂಬರ್ 2023, 16:12 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು   

ಹುಬ್ಬಳ್ಳಿ: ‘ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆ ಮೂಲಕ ಮಹಿಳೆಯರು ₹2 ಸಾವಿರ ಪಡೆಯುತ್ತಿದ್ದಾರೆ. ಆದರೆ, ಕೋವಿಡ್‌ ಸಂಕಷ್ಟದ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಿ ಜೀವದ ಗ್ಯಾರಂಟಿ ನೀಡಿದ್ದರು ಎನ್ನುವುದನ್ನು ಮರೆಯಬಾರದು’ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಮೋ ಬ್ರಿಗೇಡ್‌ ವತಿಯಿಂದ ಹಮ್ಮಿಕೊಂಡಿದ್ದ ‘ಇನ್ನೂ ಮಲಗಿದರೆ ಎದ್ದೇಳುವಾಗ ಭಾರತವಿರದು’ ಸರಣಿ ಉಪನ್ಯಾಸ ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಅವರು ಮಾತನಾಡಿದರು.

‘ಕೋವಿಡ್‌ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿತ್ತು. ಭಾರತದ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಆಗ ಪ್ರಧಾನಿ ಮೋದಿ ಅವರು ಲಸಿಕೆ ತಯಾರಿಸಲು ವಿಜ್ಞಾನಿಗಳಿಗೆ ಕರೆ ನೀಡಿದರು. ಕೋವ್ಯಾಕ್ಸಿನ್‌, ಕೋವಿಶಿಲ್ಡ್‌ ತಯಾರಿಸಲಾಯಿತು. ಕೆಲವರು ಅದರ ಗುಣಮಟ್ಟ ಸರಿಯಿಲ್ಲ ಎಂದು ಆಕ್ಷೇಪಿಸಿ, ಅಮೆರಿಕದ ಕಂಪನಿಯ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಅದ್ಯಾವುದಕ್ಕೂ ಒಪ್ಪದ ಮೋದಿ, ಸ್ವದೇಸಿ ಲಸಿಕೆಗೆ ಪ್ರಾಮುಖ್ಯತೆ ನೀಡಿದರು’ ಎಂದರು.

ADVERTISEMENT

‘20ಕ್ಕೂ ಹೆಚ್ಚು ದೇಶಗಳಿಗೆ ಭಾರತ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಿತು. ಸಂಕಷ್ಟದ ಕಾಲದಲ್ಲಿ ಭಾರತದ ಸಹಾಯ ಮೆಚ್ಚಿದ ಬ್ರೆಜಿಲ್‌ ಪ್ರಧಾನಿ ‘ಧನ್ಯವಾದ ಭಾರತ’ ಎಂದು ಟ್ವೀಟ್‌ ಮಾಡಿದ್ದರು. ಇದು ಭಾರತದ ಸಾಧನೆ. ₹250 ವೆಚ್ಚದ ಲಸಿಕೆಯನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಯಿತು’ ಎಂದು ಹೇಳಿದರು.

‘ಪಂಚರಾಜ್ಯ ಚುನಾವಣೆಯಲ್ಲಿ ಮೋದಿಯವರನ್ನು ಜನ ತಿರಸ್ಕರಿಸುತ್ತಾರೆ ಎಂದು ವಿರೋಧಿಗಳು ಲೆಕ್ಕಹಾಕಿದ್ದರು. ಅದಕ್ಕಾಗಿ ಒಂದು ಬಣವನ್ನೇ ಸಿದ್ಧಪಡಿಸಿಕೊಂಡಿದ್ದರು. ಸನಾತನ ಧರ್ಮವನ್ನು ಡೆಂಗಿಗೆ ಹೋಲಿಸಿದ್ದರು. ಉತ್ತರ ಭಾರತದ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದೂ ಕರೆದಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅವರೆಲ್ಲ ಶಾಂತವಾಗಿದ್ದಾರೆ. ಆರೋಪಿಸಿದವರು ಕ್ಷಮೆ ಕೇಳುತ್ತಿದ್ದಾರೆ. ಜಾತಿ–ಮತಗಳ ಒಡಕುಗಳನ್ನು ಮೀರಿ ಭಾರತ ಈಗ ಒಂದಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.