ಹುಬ್ಬಳ್ಳಿ: ಯುವ ಕ್ರಿಕೆಟಿಗರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರ ಈ ಬಾರಿ ಕೆಎಸ್‌ಸಿಎ ಧಾರವಾಡ ವಲಯದಲ್ಲಿ ಆಯೋಜನೆಯಾಗಿದೆ.
ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘19 ವರ್ಷದ ಒಳಗಿನವರ ಬಾಲಕರ ತಂಡಕ್ಕೆ ಮೇ 9ರಿಂದ ಜೂನ್ 2ರ ತನಕ ಬೆಳಗಾವಿಯಲ್ಲಿ ಹಾಗೂ ಬಾಲಕಿಯರ ತಂಡಕ್ಕೆ ಮೇ 16ರಿಂದ ಜೂನ್ 9ರ ತನಕ ಹುಬ್ಬಳ್ಳಿಯಲ್ಲಿ ಎನ್‌ಸಿಎ ಶಿಬಿರ ನಡೆಯಲಿದೆ. ಎರಡೂ ಕಡೆ 25 ಕ್ರಿಕೆಟಿಗರು ಹಾಗೂ ಒಂಬತ್ತು ಜನ ಸಹಾಯಕ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
‘ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆ ನಡೆದಿರಲಿಲ್ಲ. ಆದ್ದರಿಂದ ಈಗ ಕೆಎಸ್‌ಸಿಎ ರಾಜಧಾನಿ ಕೇಂದ್ರದಿಂದ ಹೊರಗೆ ಹೆಚ್ಚು ಕ್ರಿಕೆಟ್ ಚಟುವಟಿಕೆಗಳನ್ನು ಆಯೋಜಿಸಿದೆ. ಎನ್‌ಸಿಎ ಶಿಬಿರದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಿಂದ ಸ್ಥಳೀಯ ಕ್ರಿಕೆಟಿಗರಿಗೆ ತಾರಾ ಆಟಗಾರರ ಅಭ್ಯಾಸವನ್ನು ನೇರವಾಗಿ ನೋಡಲು ಅವಕಾಶ ಸಿಗುತ್ತದೆ’ ಎಂದರು.
ಚಾಲನೆ: ಧಾರವಾಡ ವಲಯದ 16 ವರ್ಷದ ಒಳಗಿನ ಕ್ರಿಕೆಟಿಗರಿಗೆ ಆಯೋಜನೆಯಾದ ಅಕಾಡೆಮಿ ಶಿಬಿರಕ್ಕೆ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯ ತಿಲಕ್ ನಾಯ್ಡು ಸೋಮವಾರ ಇಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿ ‘ರಾಜ್ಯ ತಂಡದಲ್ಲಿ ಗ್ರಾಮೀಣ ಪ್ರದೇಶಗಳಿಂದ ಹೆಚ್ಚು ಪ್ರತಿಭಾನ್ವಿತ ಆಟಗಾರರು ಬರಬೇಕು ಎನ್ನುವ ಅಪೇಕ್ಷೆ ನಮ್ಮದು. ಆದ್ದರಿಂದ ರಾಜ್ಯದ ಎಲ್ಲಾ ವಲಯಗಳಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು.
15 ದಿನಗಳ ಕಾಲ ನಡೆಯುವ ಶಿಬಿರದಲ್ಲಿ 24 ಆಟಗಾರರು ಪಾಲ್ಗೊಂಡಿದ್ದಾರೆ. ನಿತ್ಯ ಬೆಳಿಗ್ಗೆ 7ರಿಂದ 9 ಹಾಗೂ ಸಂಜೆ 4ರಿಂದ 6 ಗಂಟೆ ತನಕ ಶಿಬಿರ ಜರುಗಲಿದೆ. ಕೆಎಸ್‌ಸಿಎ ನಾಮನಿರ್ದೇಶಿತ ಕೋಚ್ ಸಿ. ರಾಘವೇಂದ್ರ, ಪ್ರಮೋದ ಕಾಮತ್, ವಿಕೆಟ್ ಕೀಪರ್ ವಿಠ್ಠಲ್ ಹಬೀಬ್, ಫಿಟ್‌ನೆಸ್ ತಜ್ಞ ಸಚಿನ್ ಘೋರ್ಪಡೆ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಟೂರ್ನಿ ಸಮಿತಿ ಚೇರ್ಮನ್ ಅಲ್ತಾಫ್ ಕಿತ್ತೂರ, ಜೂನಿಯರ್ ಕ್ರಿಕೆಟ್ ಟೂರ್ನಿ ಸಮಿತಿ ಮುಖ್ಯಸ್ಥ ವಸಂತ ಮುರ್ಡೇಶ್ವರ, ಶಿವಾನಂದ ಗುಂಜಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.