ಧಾರವಾಡ: ‘ಹುಬ್ಬಳ್ಳಿ ಧಾರವಾಡದಲ್ಲಿ ಜ. 12ರಿಂದ 16ರವರೆಗೂ ಆಯೋಜನೆಗೊಂಡಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಗರಗದಲ್ಲಿ ತಯಾರಾಗುವ ರಾಷ್ಟ್ರಧ್ವಜ ಹಾಗೂ ಧಾರವಾಡ ಪೇಢೆಯನ್ನು ಕಾಣಿಕೆಯಾಗಿ ನೀಡಲು ನಿರ್ಧರಿಸಲಾಗಿದೆ’ ಎಂದುರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
‘ಯುವಜನೋತ್ಸವದ ಯಶಸ್ಸಿಗೆ ಈಗಿನಿಂದಲೇ ತಯಾರಿ ಆರಂಭಗೊಂಡಿದೆ. ದೇಶದ ಎಲ್ಲಾ ಪ್ರದೇಶಗಳಿಂದ ಸುಮಾರು 7500 ಪ್ರತಿನಿಧಿಗಳು ಬರಲಿದ್ದಾರೆ. ಜ. 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಈಗಿನಿಂದಲೇ ನಾನಾ ಸಮಿತಿಗಳನ್ನು ರಚಿಸಿ ಪರಿಪೂರ್ಣ ಕಾರ್ಯಕ್ರಮ ರೂಪಿಸಲು ತಯಾರಿ ಆರಂಭಿಸಲಾಗಿದೆ’ ಎಂದು ತಿಳಿಸಿದರು.
‘ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ವಸತಿ ಮತ್ತು ಊಟದ ವ್ಯವಸ್ಥೆ ಮಾಡಬೇಕು. ಯಾವುದೇ ಹಂತದಲ್ಲಿಯೂ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೇಂದ್ರ ಸರ್ಕಾರದ ಸ್ಪಷ್ಟ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ಯುವಜನೋತ್ಸವ ನಡೆಯುತ್ತಿದೆ. ಈ ಕುರಿತು ತ್ವರಿತವಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಬೇಕು. ದೇಶವೇ ತಿರುಗಿನೋಡುವಂತ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ಪ್ರಧಾನಮಂತ್ರಿ ಅವರೊಂದಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗಸಿಂಗ್ ಠಾಕೂರ, ಪ್ರಲ್ಹಾದ ಜೋಶಿ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇದು ನಡೆಯುತ್ತಿದೆ’ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ‘ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಉತ್ಸವವನ್ನಾಗಿಸಲು ಹಾಗೂ ಪುನರ್‌ಬಳಕೆಯ ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸಲು ಪ್ರೇರೇಪಿಸುವಂತೆ ಉತ್ಸವ ನಡೆಸಬೇಕು. ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ತೆರೆದು ಬಂದು, ಹೋಗುವವರಿಗೆ ಸೂಕ್ತ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಉತ್ಸವದ ರೂಪುರೇಷೆಗಳ ಹಾಗೂ ಈವರೆಗೂ ಕೈಗೊಂಡ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ, ಸಾರಿಗೆ, ವಸತಿ, ಶಿಷ್ಟಾಚಾರ,ಕಾರ್ಯಕ್ರಮ ಹಾಗೂ ಸಮಾರಂಭ, ಮಾಧ್ಯಮ, ಹಣಕಾಸು ಮತ್ತು ಬಜೆಟ್, ನೀರು ಹಾಗೂ ನೈರ್ಮಲ್ಯ ಸೇರಿದಂತೆ ಒಟ್ಟು 9 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ, ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ.ಗುಡಸಿ, ಕುಲಸಚಿವ ಯಶಪಾಲ್ ಕ್ಷೀರಸಾಗರ, ಕೃಷಿ ವಿಶ್ವವಿದ್ಯಾಲಯ ಕುಲಸಚಿವ ಶಿವಾನಂದ ಕರಾಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.