ADVERTISEMENT

ಜುಲೈ 27, 28ರಂದು ರಾಷ್ಟ್ರೀಯ ಸಂಧಾನ ಸ್ಪರ್ಧೆ

ಸ್ಪರ್ಧೆಯಲ್ಲಿ ಭಾಗವಹಿಸುವ ಕಾನೂನು ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 11:34 IST
Last Updated 25 ಜುಲೈ 2024, 11:34 IST
<div class="paragraphs"><p>ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತ್ತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದ್ಯಾಲಯದ ಪ್ರಾಂಶುಪಾಲ ಜ್ಞಾನೇಶ್ವರ ಪಿ.ಚೌದರಿ ಮಾತನಾಡಿದರು.  ಶಾರದಾ ಜಿ.ಪಾಟೀಲ, ಎಸ್‌.ಎಂ.ಹುಳ್ಳೂರು ಹಾಜರಿದ್ದರು</p></div>

ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತ್ತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದ್ಯಾಲಯದ ಪ್ರಾಂಶುಪಾಲ ಜ್ಞಾನೇಶ್ವರ ಪಿ.ಚೌದರಿ ಮಾತನಾಡಿದರು. ಶಾರದಾ ಜಿ.ಪಾಟೀಲ, ಎಸ್‌.ಎಂ.ಹುಳ್ಳೂರು ಹಾಜರಿದ್ದರು

   

ಹುಬ್ಬಳ್ಳಿ: ’ನಗರದ ಬಿವಿಬಿ ಕಾಲೇಜು ಆವರಣದಲ್ಲಿನ ಐಎಂಎಸ್‌ಆರ್‌ ಸಭಾಂಗಣದಲ್ಲಿ ಜುಲೈ 27 ಮತ್ತು 28ರಂದು ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತ್ತಂಬ್ರಿ ಕಾನೂನು ಮಹಾವಿದ್ಯಾಲಯದ ವತಿಯಿಂದ ಕೆಎಲ್‌ಇ ಲಾ ಅಕಾಡೆಮಿಯ ‘2ನೇ ರಾಷ್ಟ್ರೀಯ ಸಂಧಾನ ಸ್ಪರ್ಧೆ-2024’ ಹಮ್ಮಿಕೊಳ್ಳಲಾಗಿದೆ‘ ಎಂದು ಕಾನೂನು ಮಹಾವಿದ್ಯಾಲಯದ ಪ್ರಾಂಶು‍ಪಾಲ ಜ್ಞಾನೇಶ್ವರ ಪಿ.ಚೌರಿ ಹೇಳಿದರು.

‘ಬೆಂಗಳೂರು, ಉಡುಪಿ, ವಿಜಯಪುರ, ಮೈಸೂರು, ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿನ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 22 ತಂಡಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಎರಡು ದಿನ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಲಭ್ಯವಿದೆ’ ಎಂದು ಗುರುವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಸಿವಿಲ್‌ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಕ್ಷಿದಾರರಲ್ಲಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ವೃತ್ತಿ ಕೌಶಲವನ್ನು ವಿದ್ಯಾರ್ಥಿಗಳಲ್ಲಿ ಕಲಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಸಣ್ಣ ಪುಟ್ಟ ಸಿವಿಲ್‌ ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರುತ್ತಿದ್ದು, ತ್ವರಿತವಾಗಿ ಇತ್ಯರ್ಥವಾಗುವಲ್ಲಿಯೂ ವಿಳಂಬವಾಗುತ್ತಿದೆ. ಇದರಿಂದ ಕಕ್ಷಿದಾರರಿಗೆ ಸಕಾಲಕ್ಕೆ ನ್ಯಾಯ ಸಿಗುವುದಿಲ್ಲ. ಕಾನೂನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಆದಷ್ಟು ಸಿವಿಲ್‌ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವಂತಹ ವೃತ್ತಿ ನಿಪುಣತೆಯನ್ನು ಕಲಿಯಲು ಈ ಸ್ಪರ್ಧೆ ಪೂರಕವಾಗಲಿದೆ’ ಎಂದರು.

‘ಸಂಧಾನದ ಮೂಲಕ ಪ್ರಕರಣ ಇತ್ಯರ್ಥದಿಂದ ಕಕ್ಷಿದಾರರ ಸಮಯ, ಹಣ ಉಳಿತಾಯವಾಗಲಿದೆ. ತ್ವರಿತವಾಗಿ ನ್ಯಾಯ ಸಿಗಲಿದೆ. ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಉಳಿಸಿದಂತಾಗುತ್ತದೆ. ಇದನ್ನು ಯುವ ವಕೀಲರು ಕಲಿಯಬೇಕು. ಜೊತೆಗೆ ಈ ಬಗ್ಗೆ ಕಕ್ಷಿದಾರರಿಗೂ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ‘ ಎಂದರು.

‘ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹10 ಸಾವಿರ ನಗದು ಹಾಗೂ ಟ್ರೋಫಿ. 2ನೇ ಸ್ಥಾನ ಪಡೆದ ತಂಡಕ್ಕೆ ₹7,500 ನಗದು ಹಾಗೂ ಟ್ರೋಫಿ. ಮೂರನೇ ಸ್ಥಾನ ಪಡೆದ ತಂಡಕ್ಕೆ ‘ಉತ್ತಮ ಸಂಧಾನ’ ತಂಡ ಎಂಬ ಟ್ರೋಫಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಜುಲೈ 27ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿನೇಶ ಕುಮಾರ ಉದ್ಘಾಟಿಸುವರು. ಬಿ.ಎಸ್‌.ಪಾಟೀಲ, ಗಂಗಾಧರ ಹೊಸಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜುಲೈ 28ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಸ್‌.ಪಾಚ್ಚಾಪುರೆ ಅವರು, ವಿಜೇತ ತಂಡಗಳಿಗೆ ಟ್ರೋಫಿ ವಿತರಿಸುವರು. ಪ್ರೊ.ಜಿ.ಬಿ.ಪಾಟೀಲ, ಎಂ.ಐ.ಶಿಗ್ಲಿ, ಜೆ.ಎಂ.ಮಲ್ಲಿಕಾರ್ಜುನಯ್ಯ ಭಾಗವಹಿಸುವರು ಎಂದರು.

ಗುರುಸಿದ್ದಪ್ಪ ಕೋತ್ತಂಬ್ರಿ ಕಾನೂನು ಮಹಾವಿದ್ಯಾಲಯದ ಶಾರದಾ ಜಿ.ಪಾಟೀಲ, ಎಸ್‌.ಎಂ.ಹುಳ್ಳೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.