ಧಾರವಾಡ: ದೇಶದ ವಿವಿಧ ಭಾಗಗಳಿಂದ ಹಲವು ನಿರೀಕ್ಷೆಗಳೊಂದಿಗೆ ಬಂದಿದ್ದ ಯುವ ಮನಸ್ಸುಗಳು ಧಾರವಾಡದ ಮಧುರ ನೆನಪು ಹಾಗೂ ಭರವಸೆಯ ಬೆಳಕನ್ನು ಹೊತ್ತೊಯ್ದರು.
ಸೋಮವಾರ ನಡೆದ 26ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪದಲ್ಲಿ ಪಾಲ್ಗೊಂಡ ಪ್ರತಿನಿಧಿಗಳಲ್ಲಿ ಉತ್ಸಾಹದ ಜತೆಗೆ ಬಹುಮಾನ ಯಾರಿಗೆ ಎಂಬ ಕುತೂಹಲ ಮನೆ ಮಾಡಿತ್ತು.
ಐದು ದಿನಗಳಿಂದ ನಡೆದ ಜಾನಪದ ನೃತ್ಯ ಹಾಗೂ ಹಾಡಿನ ಸ್ಪರ್ಧೆಯ ಫಲಿತಾಂಶಕ್ಕಾಗಿ 8 ಕೇಂದ್ರಾಡಳಿತ ಪ್ರದೇಶ ಹಾಗೂ ಆತಿಥೇಯ ಕರ್ನಾಟಕ ಸೇರಿದಂತೆ 28 ರಾಜ್ಯಗಳ ತಂಡಗಳು ತುದಿಗಾಲಲ್ಲಿ ನಿಂತಿದ್ದವು.
ಜಾನಪದ ನೃತ್ಯದಲ್ಲಿ ಮೊದಲ ಬಹುಮಾನ ಪಂಜಾಬ್ ತಂಡಕ್ಕೆ ಘೋಷಣೆಯಾಗುತ್ತಿದ್ದಂತೆ, ‘ಜೊ ಬೋಲೆ... ಸೋ ನಿಹಾಲ್...’ ಎಂಬ ಘೋಷಣೆ ಮೊಳಗಿತು. ಪಂಜಾಬ್ ತಂಡದವರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವಿಭಾಗದಲ್ಲಿ ಗುಜರಾತ್ ಹಾಗೂ ಕೇರಳ ಕ್ರಮವಾಗಿ ಎರಡು ಹಾಗೂ 3ನೇ ಸ್ಥಾನ ಪಡೆದವು.
‘ಜಾನಪದ ಹಾಡು’ ಸ್ಪರ್ಧೆಯ ಬಹುಮಾನ ಪ್ರಕಟಣೆ ಸಂದರ್ಭದಲ್ಲಿ ಮೊದಲಿಗೆ ಘೋಷಣೆಯಾದ ಕರ್ನಾಟಕ ತಂಡದ ಹೆಸರಿಗೂ ಅದೇ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ವಿಭಾಗದ ಮೊದಲ ಬಹುಮಾನ ಉತ್ತರ ಪ್ರದೇಶಕ್ಕೆ ಹಾಗೂ ದ್ವಿತೀಯ ಬಹುಮಾನ ಅಸ್ಸಾಂ ತಂಡಕ್ಕೆ ಲಭಿಸಿತು.
ಹೊರರಾಜ್ಯಗಳ ಪ್ರತಿನಿಧಿಗಳು ಧಾರವಾಡ ಹಾಗೂ ಕರ್ನಾಟಕದ ಆತಿಥ್ಯವನ್ನು ಮನಸಾರೆ ಹೊಗಳಿದರು. ಪ್ರತಿ ಪ್ರದೇಶದ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಸಮಾರೋಪದಲ್ಲಿ ಪಾಲ್ಗೊಂಡಿದ್ದರು.
ಲಡಾಕ್‌ನ ಮಾಸೂಮಾ ಪ್ರತಿಕ್ರಿಯಿಸಿ, ‘ಕೇರಳದ ಲುಂಗಿ, ಕರ್ನಾಟಕದ ಊಟ, ಕೊಲ್ಹಾಪುರದ ಚಪ್ಪಲಿ ಸೇರಿದಂತೆ ಸಮಗ್ರ ಭಾರತದ ದರ್ಶನವಾಯಿತು‘ ಎಂದರು.
ಸಿಕ್ಕಿಂನ ಭೀಮ್ ಸುಬ್ಬು ಪ್ರತಿಕ್ರಿಯಿಸಿ, ‘ಎಲ್ಲ ರಾಜ್ಯಗಳ ಜಾನಪದ ಕಲೆಯನ್ನು ಒಂದೇ ಕಡೆ ನೋಡುವ ಸೌಭಾಗ್ಯ ಇಲ್ಲಿ ದೊರೆಯಿತು. ಭಾರತವನ್ನು ನೋಡುವುದು ಇನ್ನೂ ಸಾಕಷ್ಟಿದೆ ಎನಿಸಿತು’ ಎಂದರು.
ಕೊನೆಯ ದಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ರಸ ಸಂಜೆ ಕಾರ್ಯಕ್ರಮದೊಂದಿಗೆ ಐದು ದಿನಗಳ ರಾಷ್ಟ್ರೀಯ ಯುವಜನೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.