ADVERTISEMENT

ನವಲಗುಂದ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ

ನವಲಗುಂದ; ‍ನಿರೀಕ್ಷಿತ ಆದಾಯ ಬಾರದೆ ‍ಆರ್ಥಿಕ ಸಂಕಷ್ಟದಲ್ಲಿ ಪುರಸಭೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:52 IST
Last Updated 22 ಮೇ 2024, 5:52 IST

ನವಲಗುಂದ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಪರವಾನಗಿ ಪಡೆದು ವಾಣಿಜ್ಯ ಕಟ್ಟಡಗಳ ನಿರ್ಮಾಣ ಹಾಗೂ ಒಂದು ಮಹಡಿ ಹೆಸರಿನಲ್ಲಿ ಪರವಾನಗಿ ಪಡೆದು ಎರಡು, ಮೂರು ಮಹಡಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪುರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟ ಆಗುತ್ತಿದೆ.

ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಜನವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಸಾವಿರಕ್ಕೂ ಹೆಚ್ಚು ಒಂದು ಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪುರಸಭೆ ಪರವಾನಗಿ ನೀಡಿದೆ. ಆದರೆ, ನಿಯಮ ಉಲ್ಲಂಘಿಸಿ ಒಂದು ಮಹಡಿ ಬದಲು 2 ರಿಂದ 3 ಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.  

ಅಧಿಕಾರಿಗಳು ಈವರೆಗೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಪುರಸಭೆಗೆ ವಾರ್ಷಿಕ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣ ಆರಂಭವಾಗುತ್ತಿದ್ದಂತೆ ಪುರಸಭೆಯ ಕಂದಾಯ  ಅಧಿಕಾರಿಗಳು, ಎಂಜಿನಿಯರ್‌ಗಳು ಕಾಲಕಾಲಕ್ಕೆ ಸ್ಥಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆಯಾಗದಂತೆ ಹಾಗೂ ಸೆಟ್ ಬ್ಯಾಕ್ ಬಿಟ್ಟಿರುವುದನ್ನು ಖಚಿತಪಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

‘ಪುರಸಭೆ ವ್ಯಾಪ್ತಿಯಲ್ಲಿ ಅನೇಕರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಮಾಬೂಸಾಬ ಯರಗುಪ್ಪಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.