ADVERTISEMENT

ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎನ್‌ಬಿಎ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:20 IST
Last Updated 11 ಡಿಸೆಂಬರ್ 2019, 13:20 IST
ಕೆೆಎಲ್‌ಇ
ಕೆೆಎಲ್‌ಇ   

ಹುಬ್ಬಳ್ಳಿ: ಕೆ.ಎಲ್‌.ಇ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್‌ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್‌ಬಿಎ)ಯಿಂದ 2019–20 ರಿಂದ 2021–22ನೇ ಸಾಲಿನ ವರಗೆ ಮಾನ್ಯತೆ ಸಿಕ್ಕಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಬಸವರಾಜ ಅನಾಮಿ ತಿಳಿಸಿದರು.

ಮಹಾವಿದ್ಯಾಲಯದ ಯಾಂತ್ರಿಕ, ವಿದ್ಯುನ್ಮಾನ ಮತ್ತು ಸಂಪರ್ಕ, ಮಾಹಿತಿ ಮತ್ತು ವಿಜ್ಞಾನ ಮತ್ತು ಗಣಕ ಯಂತ್ರ ವಿಜ್ಞಾನ ಎಂಜಿನಿಯರಿಂಗ್‌ ವಿಭಾಗಗಳಿಗೆ ಈಗಾಗಲೇ ಮೂರು ವರ್ಷಗಳ ವರೆಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ ಎಂದು ಬುಧವಾರ ಪತ್ರಿಕಾಗೋಷ್ಠೀಯಲ್ಲಿ ಹೇಳಿದರು.

2008ರಲ್ಲಿ ಪ್ರಾರಂಭವಾದ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯವು ಅತ್ಯಂತ ಕಡಿಮೆ ಅವಧಿಯಲ್ಲೇ ಎಲ್ಲಾ ವಿಭಾಗಗಳಿಗೂ ಎನ್‌ಬಿಎ ಮಾನ್ಯತೆ ಪಡೆದ ಕರ್ನಾಟಕದ ಏಕೈಕ ಮಹಾವಿದ್ಯಾಲಯವಾಗಿದೆ ಎಂದರು.

ADVERTISEMENT

ಎಐಸಿಟಿಇ ನಿಗದಿ ಪಡಿಸಿದ ರೀತಿಯಲ್ಲಿ ಮಹಾವಿದ್ಯಾಲಯದ ಶೈಕ್ಷಣಿಕ ಸೌಲಭ್ಯಗಳು, ಗುಣಾತ್ಮಕ ಶಿಕ್ಷಣ ಪದ್ಧತಿಗಳ ಅಳವಡಿಕೆ, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್‌ ನೇಮಕಾತಿ, ಕ್ಯಾಂಟೀನ್‌ ಮತ್ತು ಹಾಸ್ಟೆಲ್‌ ಸೌಲಭ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಮಾನ್ಯತೆ ನೀಡಲಾಗಿದೆ ಎಂದು ಹೇಳಿದರು.

‘ಶೈಕ್ಷಣಿಕ ಮಾನ್ಯತೆ’ ಎನ್ನುವುದು ಗುಣಮಟ್ಟದ ಭರವಸೆ ಮತ್ತು ಸುಧಾರಣೆಯ ಒಂದು ಪ್ರಕ್ರಿಯೆಯಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವುದು ಮತ್ತು ಗುರುತಿಸುವುದು ಇದರ ಉದ್ದೇಶವಾಗಿದೆ. ಈ ಪ್ರಕ್ರಿಯೆಯಲ್ಲಿ ಸಾಮರ್ಥ್ಯ, ಅಧಿಕಾರ ಮತ್ತು ವಿಶ್ವಾಸಾರ್ಹತೆಯನ್ನು ಪ್ರಮಾಣೀಕರಣವನ್ನು ಮಹಾವಿದ್ಯಾಲಯಕ್ಕೆ ನೀಡಲಾಗಿದೆ. ಅಲ್ಲದೇ, ಇದು ಗುಣಮಟ್ಟದ ಆಶ್ವಾಸನೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ನಾಗರಾಜ ಬಿ.ಶೆಟ್ಟಿ, ಕಿರಣ ದೊಡ್ಡಮನಿ, ಕೊಟ್ರೇಶ ಕೋರಡ್ಡಿ, ಕಿರಣಿ ಮಳಗಿ ಇದ್ದರು.‌‌‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.