ಹುಬ್ಬಳ್ಳಿ: ನೃಪತುಂಗ ಬೆಟ್ಟ, ಕೆಎಸ್‌ಸಿಎ ಕ್ರಿಕೆಟ್ ಮೈದಾನ, ಕೇಂದ್ರೀಯ ವಿದ್ಯಾಲಯ, ಪಿರಾಮಿಡ್ ಧ್ಯಾನಮಂದಿರ, ಡಿ.ಎಸ್.ಕರ್ಕಿ ಕನ್ನಡಭವನ ಸೇರಿದಂತೆ ಹತ್ತು ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಒಡಗೂಡಿರುವ ರಾಜನಗರ ಮತ್ತು ವಿಶ್ವೇಶ್ವರ ನಗರ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ಎನ್‌ಸಿಸಿ ತರಬೇತಿ ಅಕಾಡೆಮಿ ತಲೆ ಎತ್ತಲಿದೆ.
ಭಾರತೀಯ ಸೇನೆಗೆ ಸೇರಿದ 20 ಎಕರೆ ಜಾಗದಲ್ಲಿ ಎನ್‌ಸಿಸಿ ತರಬೇತಿ ಅಕಾಡೆಮಿ ಸ್ಥಾಪನೆ ಸಂಬಂಧ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಈ ಸಂಬಂಧ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಬಿ.ಎಂ.ಪೂರ್ವಿಮಠ, ಶಾಸಕ ಜಗದೀಶ ಶೆಟ್ಟರ್, 28 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ವಿವೇಕಾನಂದ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಬ್ರಿಗೇಡಿಯರ್ ಬಿ.ಎಂ.ಪೂರ್ವಿಮಠ, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶಾಲಾ, ಕಾಲೇಜುಗಳಲ್ಲಿ 10 ಸಾವಿರಕ್ಕೂ ಅಧಿಕ ಎನ್‌ಸಿಸಿ ಕೆಡೆಟ್‌ಗಳು ಇದ್ದು, ಇವರಿಗೆ ಒಂದೇ ಸೂರಿನಡಿ ತರಬೇತಿ ನೀಡಲು ಅನುಕೂಲವಾಗುವಂತೆ ಅಕಾಡೆಮಿ ಸ್ಥಾಪಿಸುವ ಉದ್ದೇಶವಿದೆ ಎಂದರು.
ಎನ್‌ಸಿಸಿ ತರಬೇತಿ ಅಕಾಡೆಮಿ ಆಡಳಿತ ಭವನ, ತರಬೇತಿ ಭವನ, ಕೆಡೆಟ್‌ಗಳಿಗೆ ಹಾಸ್ಟೆಲ್‌ಸೌಲಭ್ಯ, ಎನ್‌ಸಿಸಿ ಅಧಿಕಾರಿಗಳಿಗೆ ವಸತಿ ಸೌಲಭ್ಯ, ಇನ್‌ಡೋರ್ ಶೂಟಿಂಗ್ ರೇಂಜ್, ಪರೇಡ್ ಗ್ರೌಂಡ್, ಕ್ರೀಡಾಸೌಲಭ್ಯ ಸೇರಿದಂತೆ ಶಿಬಿರ ನಡೆಸಲು ಬೇಕಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಗಣರಾಜ್ಯೋತ್ಸವ ಪರೇಡ್ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ವಿವಿಧ ಎನ್‌ಸಿಸಿ ಶಿಬಿರಗಳಿಗೆ ಆಯ್ಕೆಯಾಗುವವರಿಗೆ ಈ ಅಕಾಡೆಮಿಯಲ್ಲಿ ಉನ್ನತ ತರಬೇತಿ ನೀಡಲಾಗುವುದು ಎಂದರು.
ಪ್ರತಿ ವರ್ಷ ಶಾಲಾ, ಕಾಲೇಜುಗಳ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರಗಳನ್ನು ಅಕಾಡೆಮಿಯಲ್ಲೇ ಆಯೋಜಿಸಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಅಕಾಡೆಮಿಯಲ್ಲಿ ಒಮ್ಮೆಗೆ ಮೂರು ಸಾವಿರ ಕೆಡೆಟ್‌ಗಳಿಗೆ ತರಬೇತಿ ನೀಡಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶೆಟ್ಟರ್ ಆಸಕ್ತಿ:‘ವಿಶ್ವೇಶ್ವರ ನಗರ ಮತ್ತು ರಾಜ ನಗರ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆಗೆ ಸೇರಿದ ಜಾಗದಲ್ಲಿ ಸೈನಿಕ ಶಾಲೆ ಅಥವಾ ಎನ್‌ಸಿಸಿ ತರಬೇತಿ ಅಕಾಡೆಮಿ ಆರಂಭಿಸುವಂತೆ ರಾಜ್ಯದವರೇ ಆದ ಬ್ರಿಗೇಡಿಯರ್ ಬಿ.ವಿ.ಪೂರ್ವಿಮಠ ಅವರಿಗೆ ನಾನು ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಾರತೀಯ ಸೇನೆಗೆ ಸೇರಿರುವ ಜಾಗ ಕೆಲವು ಕಡೆ ಒತ್ತುವರಿ ಮಾಡಿ, ಅನಧಿಕೃತ ಕಟ್ಟಡಗಳು ತಲೆ ಎತ್ತಲು ಆರಂಭಿಸಿವೆ. ಈ ಜಾಗವನ್ನು ಸಂರಕ್ಷಿಸುವ ಉದ್ದೇಶದಿಂದ ಆದಷ್ಟು ಬೇಗ ಅಕಾಡೆಮಿ ಆರಂಭಿಸುವಂತೆ ಬ್ರಿಗೇಡಿಯರ್ ಅವರನ್ನು ಕೋರಿದ್ದೇನೆ. ಆದಷ್ಟು ಶೀಘ್ರದಲ್ಲೇ ಎನ್‌ಸಿಸಿ ತರಬೇತಿ ಅಕಾಡೆಮಿ ಆರಂಭಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.