ಹುಬ್ಬಳ್ಳಿ: 'ನೇಹಾ ಕೊಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸಬಾರದು, ಏನನ್ನೂ ಮುಚ್ಚಿಡಬಾರದು ಎಂದಾದರೆ ರಾಜ್ಯ ಸರ್ಕಾರ ತಕ್ಷಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು' ಎಂದು ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಶುಕ್ರವಾರ ನೇಹಾ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
'ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿತಪ್ಪಿದೆ. ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದಿದ್ದರೆ, ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಲಿ. ಈ ಕೊಲೆಯ ಹಿಂದೆ ಇನ್ನಷ್ಟು ಜನ ಇದ್ದಾರೆ, ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ಕೊಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹ. ಆದರೆ, ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ' ಎಂದು ಆರೋಪಿಸಿದರು.
'ಈ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ' ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ಕಾಲೇಜು ಆವರಣದಲ್ಲಿ ಕೊಲೆ ನಡೆದಾಗ ವಿರೋಧ ಪಕ್ಷ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ನಿರೀಕ್ಷೆ ಮಾಡಿದ್ದರಾ? ಅವರು ವಿರೋಧ ಪಕ್ಷದಲ್ಲಿದ್ದಿದ್ದರೆ ಸುಮ್ಮನೆ ಕೂತಿರುತ್ತಿದ್ದರಾ? ಇಡೀ ಕರ್ನಾಟಕದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮಠಾಧೀಶರು ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಅವರೆಲ್ಲರೂ ರಾಜಕೀಯ ಮಾಡುತ್ತಿದ್ದಾರಾ? ಈ ಪ್ರಕರಣಕ್ಕೆ ರಾಜಕೀಯ ಲೇಪ ಬಂದಿರುವುದೇ ಕಾಂಗ್ರೆಸ್‌ನವರ ಮಾತುಗಳಿಂದ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ನೇಹಾ ಕೊಲೆ ಪ್ರಕರಣದಲ್ಲಿ ಪೊಲಿಸರು ಅರೋಪಿಯನ್ನು ಬಂಧಿಸಿ, ವಿಚಾರಣೆಗೆ ತಮ್ಮ ವಶಕ್ಕೆ ಪಡೆಯದೆ, ನ್ಯಾಯಾಂಗ ಬಂಧನಕ್ಕ ಒಪ್ಪಿಸಿರುವುದು ಯಾಕೆ? ಇದರಿಂದಲೇ ತಿಳಿಯುತ್ತದೆ ಪ್ರಕರಣ ದಾರಿ ತಪ್ಪಿದೆ ಎಂದು. ಇದರ ಹಿಂದೆ ಯಾರ್ಯಾರು ಇದ್ದಾರೆ ಎಂದು ನೇಹಾ ತಂದೆ ಪೊಲಿಸರಿಗೆ ಮಾಹಿತಿ ನೀಡಿದ್ದರೂ ಅವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಅನೇಕರು ಫೋನ್‌ನಲ್ಲಿ ಮಾತನಾಡಿದ್ದಾರೆ. ಅದೆಲ್ಲವೂ ತನಿಖೆಯಾಗಬೇಕು' ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.