ಹುಬ್ಬಳ್ಳಿ: ಲವ್ ಜಿಹಾದ್ ಪ್ರಕರಣದಲ್ಲೇ ನೇಹಾ ಹತ್ಯೆ ಅತ್ಯಂತ ಗಂಭೀರ ಪ್ರಕರಣ. ಇಂತಹ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಲವ್ ಜಿಹಾದ್ ಪ್ರಕರಣದಲ್ಲಿ ನೇಹಾ ಹತ್ಯೆಯೇ ಕೊನೆಯಾಗಬೇಕು ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಬಿಡನಾಳದಲ್ಲಿರುವ ಮೃತ ನೇಹಾ ಹಿರೇಮಠ ಅವರ ಮನೆಗೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ಬೇಟಿ ಬಚಾವೊ, ಬೇಟಿ ಪಡಾವೋ ಎನ್ನುತ್ತಿದ್ದರೆ ರಾಜ್ಯದಲ್ಲಿ ಹೆಣ್ಣುಮಕ್ಕಳು ಹೆಣವಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಕಾನೂನಿದೆ. ನೇಹಾ ಹೆಸರಲ್ಲೂ ಕಾನೂನು ರೂಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅಗತ್ಯವಿದ್ದರೆ ಎನ್‌ಕೌಂಟರ್ ಮಾಡಲಿ ಎಂದು ಆಗ್ರಹಿಸಿದರು.
ಈ ಘಟನೆಯಿಂದ ಪೋಷಕರಿಗೆ ಆತಂಕ ಶುರುವಾಗಿದೆ. ಸರ್ಕಾರದ ಬೇಜವಾಬ್ದಾರಿ ಹೇಳಿಕೆಯೇ ಇದಕ್ಕೆ ಪ್ರೇರಣೆಯಾಗುತ್ತಿದೆ. ಇದು ತಾರ್ಕಿಕ ಅಂತ್ಯ ಕಾಣಬೇಕು. ಲವ್ ಜಿಹಾದ್ ಹಿಂದಿನ ಷಡ್ಯಂತ್ರವನ್ನು ಹೆಣ್ಣುಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಇದು ಲವ್ ಜಿಹಾದ್ ಪ್ರಕರಣ ಎಂದು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಸಿಎಂ ನಿರ್ಲಕ್ಷ್ಯದ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಿದಾಗ ಸಹಜವಾಗಿ ಅದು ರಾಜಕೀಯ ರೂಪ ಪಡೆಯುತ್ತದೆ. ಇದು ಮನೆ ಮನೆಯ ಹೆಣ್ಣುಮಕ್ಕಳ ವಿಚಾರ. ನ್ಯಾಯ ಸಿಗುವವರೆಗೆ ವ್ಯಾಪಕ ಹೋರಾಟ ಮಾಡಲಾಗುತ್ತದೆ ಎಂದರು.
ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನೇಹಾ ಪೋಷಕರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.