ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಕೊಲೆ ಆರೋಪಿ ಫಯಾಜ್ ವಿರುದ್ಧ ಘೋಷಣೆಗಳನ್ನು ಕೂಗಿ, ಗಲ್ಲಿಗೇರಿಸುವಂತೆ ಒತ್ತಾಯಿಸಿದರು. ನೇಹಾ ಹಿರೇಮಠ ಅಂತ್ಯ ಸಂಸ್ಕಾರ ಆಗುವುದರೊಳಗೆ ಫಯಾಜ್ ಸಹ ಅಂತ್ಯಕಾಣಬೇಕು ಎಂದು ಆಗ್ರಹಿಸಿದರು. ಗಲ್ಲು ಶಿಕ್ಷೆ ವಿಧಿಸಲೇಬೇಕು ಎನ್ನುವ ಕೂಗು ಮುಗಿಲುಮುಟ್ಟಿತ್ತು.
ಭಿತ್ತಿಪತ್ರ ಪ್ರದರ್ಶಿಸಿ ನ್ಯಾಯಕ್ಕಾಗಿ ಆಗ್ರಹಿಸಿ, ಜೈಶ್ರೀರಾಮ, ಭಾರತ ಮಾತಾಕೀ ಜೈ ಘೋಷಣೆ ಕೂಗಿದರು. ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯಲ್ಲಿ ಧರಣಿ ಕುಳಿತು, ವಾಹನಗಳ ಸಂಚಾರ ಸ್ಥಗಿತಗೊಳಿಸಿದರು. ಸಂಚಾರ ದಟ್ಟಣೆ ಏರ್ಪಟ್ಟಿತು. ಕಾಲೇಜ್ ಬಂದ್ ಕರೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಾಲೇಜುಗಳು ಬಂದ್ ಆಗಿದ್ದವು.
ಪೊಲೀಸ್ ಕಮಿಷನರ್ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಧರಣಿ ಮುಂದುವರಿಸಿದರು. ಕೆಲವು ಸಮಯದ ನಂತರ ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರನ್ನು ಮುತ್ತಿಗೆ ಹಾಕಿ, ನ್ಯಾಯಕ್ಕಾಗಿ ಒತ್ತಾಯಿಸಿದರು.
ನಂತರ ಮಾತನಾಡಿದ ಕಮಿಷನರ್, 'ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸಮಾಧಾನದಿಂದ ಇರಬೇಕು ಎಂದು ವಿನಂತಿಸಿದರು.
ಸ್ಥಳದಲ್ಲಿ ಡಿಸಿಪಿ ರಾಜೀವ್ ಎಂ. ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಭದ್ರತಾ ಪಡೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆ:
ವಿದ್ಯಾರ್ಥಿಗಳು ಟಾಯರ್'ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಜಾಗರಣ ವೇದಿಕೆ ಸಂಘಟನೆ ಸದಸ್ಯರು 'ಲವ್ ಜಿಹಾದ್ ನಡೆಸಿರುವ ಫಯಾಜ್'ನನ್ನು ಗಲ್ಲಿಗೇರಿಸಬೇಕು' ಎಂದು ಒತ್ತಾಯಿಸಿದರು. ಕರ್ನಾಟಕ ದಲಿತ ವಿಮೋಚನಾ ಸಮಿತಿ ಸದಸ್ಯರು ಚನ್ನಮ್ಮ ವೃತ್ತದಿಂದ ಬಿವಿಬಿ ಕಾಲೇಜ್ ಮುಂಭಾಗದವರೆಗೆ, ತಮಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.