ಹುಬ್ಬಳ್ಳಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆ ಭಾನುವಾರ ಮಕ್ಕಳ ದಿನ ಆಚರಿಸಲಾಯಿತು. ಚಿಣ್ಣರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಆಡಿ ನಲಿದಾಡಿ ಖುಷಿಪಟ್ಟರು.
ಕುಂದಗೋಳ ತಾಲ್ಲೂಕಿನ ಬೆಟದೂರಿನಲ್ಲಿರುವ ವೇದಾಂತ ಫೌಂಡೇಷನ್‌ನ ನಂದಘರ್ ಅಂಗನವಾಡಿ ಕೇಂದ್ರದಲ್ಲಿ ವಿವಿಧ ವೇಷತೊಟ್ಟು ಬಂದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲ ಮೂರು ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಫೌಂಡೇಷನ್‌ನ ರೂಪಾಲಿ ನಾಯಕ್, ಅಬ್ದುಲ್, ಸುಶಾಂತ ರೆಡ್ಡಿ, ರೀಫತ್ ಹಾಗೂ ಅಂಗನವಾಡಿ ಕೇಂದ್ರ ಸಿಬ್ಬಂದಿ ಇದ್ದರು.
ಭಾವದೀಪ ಶಾಲೆ: ಭವಾನಿ ನಗರದ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ರಿಯಾ ಪಾಟೀಲ ಕುಲಕರ್ಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಶಿಕ್ಷಕರು ನೃತ್ಯ, ಹಾಡು, ಅಭಿನಯದ ಮೂಲಕ ಮಕ್ಕಳನ್ನು ರಂಜಿಸಿದರು. ಶಾಲಾ ವ್ಯವಸ್ಥಾಪಕಿ ಸಚೇತ. ಬಿ. ರಾವ್, ಪ್ರಾಚಾರ್ಯೆ ಶ್ರೀದೇವಿ ಮಳಗಿ, ಅಂಜನಾ ಕುರುಡೇಕರ್, ಅನಿತಾ ಬಾಗಲಕೋಟಿ, ಜ್ಯೋತಿ ಬುಳ್ಳ, ಸುಮಂಗಲ ಹುಡೇದ, ಕವಿತಾ ಬಂಕಾಪುರ ಇದ್ದರು.
ಕಣ್ಣಿನ ತಪಾಸಣೆ: ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಹುಬ್ಬಳ್ಳಿ, ಧಾರವಾಡ ಮತ್ತು ಕೊಪ್ಪಳದಲ್ಲಿ ವಿವಿಧ ಕಾರ್ಯಕ್ರಮ ನಡೆದವು. ಧಾರವಾಡದಲ್ಲಿ ಉಚಿತ ನೇತ್ರ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಗೋಕುಲ ರಸ್ತೆಯ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಮತ್ತು ವೇಷಭೂಷಣ ಸ್ಪರ್ಧೆ ನಡೆಯಿತು.
ಮಜೇಥಿಯಾ ಫೌಂಡೇಷನ್: ನಗರದ ವೀರಾಪುರ ಓಣಿಯಲ್ಲಿರುವ ಅನಾಥಾಶ್ರಮ ಸ್ನೇಹ ಶಿಕ್ಷಣ ಮತ್ತು ಉಜ್ವಲ ಕೇಂದ್ರದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ನಡೆಯಿತು.
ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯ ಎಂಜಿನಿಯರ್ ಬಾಲಚಂದ್ರ ‘ನಾನು ಅನಾಥ ಎನ್ನುವ ಭಾವನೆ ಮಕ್ಕಳ ಮನಸ್ಸಿನಿಂದ ದೂರವಾಗಬೇಕು. ನಿರಂತರ ಪ್ರಯತ್ನವಿದ್ದರೆ ಮಾತ್ರ ಕಂಡ ಕನಸು ನನಸಾಗಲು ಸಾಧ್ಯ’ ಎಂದರು.
ವೈದ್ಯೆ ರಕ್ಷಾ, ಪ್ರಾಚಾರ್ಯೆ ಶ್ರೀಶೈಲ ಬಿ.ಎಂ., ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಕೆ.ಜಿ. ಪೂಜಾರ, ಯೋಜನಾ ನಿರ್ದೇಶಕಿ ಆಶಾ ಡಿ., ಆಪ್ತ ಸಮಾಲೋಚಕಿ ಜ್ಯೋತಿ ಬಿ., ಜ್ಯೋತಿ ಗಡಾದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.