ಹುಬ್ಬಳ್ಳಿ: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ(ಎನ್ಇಪಿ)ಯ ತರಾತುರಿ ಜಾರಿಯಿಂದಾದ ಒಂದೊಂದೇ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿದ್ದು, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರ ಸಮರ್ಥನೆಗಳ ನಡುವೆಯೇ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳ ವಿರುದ್ಧ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಯುಯುಸಿಎಂಎಸ್ ಸಮಸ್ಯೆ: ಇಲಾಖೆ ಕಡ್ಡಾಯಗೊಳಿಸಿರುವ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್), ವಿದ್ಯಾರ್ಥಿ ಗಳನ್ನು ಹೈರಾಣಾಗಿಸಿದೆ. ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ ಪಾವತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಿದ್ದು, ಮೌಲ್ಯಮಾಪನದ ಮಾಹಿತಿ ದಾಖಲಿಸಲು ಉಪನ್ಯಾಸಕರಿಗೂ ತೊಂದರೆಯಾಗಿತ್ತು. ನಂತರ ಆಫ್‌ಲೈನ್‌ನಲ್ಲಿ ನಡೆಸಲು ಇಲಾಖೆ ಅನುಮತಿ ನೀಡಬೇಕಾಗಿ ಬಂದಿತ್ತು.
ಬಾರದ ಫಲಿತಾಂಶ: ಕವಿವಿ ಸೇರಿದಂತೆ ಹಲವು ವಿ.ವಿಗಳು ಎರಡು ಸೆಮಿಸ್ಟರ್‌ಗಳ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ. ಫಲಿತಾಂಶವೇ ನೀಡದೆ ವಿದ್ಯಾರ್ಥಿಗಳ ದಾಖಲಾತಿ ಮಾಡಿಸಿಕೊಂಡು ತರಗತಿ ನಡೆಸಲಾಗುತ್ತಿದೆ.
ಕೈಸೇರದ ವಿದ್ಯಾರ್ಥಿ ವೇತನ: ಕಳೆದ ಸೆಮಿಸ್ಟರ್‌ನ ಅಂಕಪಟ್ಟಿ ಸಿಗದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲಾಗದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೈಕ್ಷಣಿಕ ಖರ್ಚುವೆಚ್ಚಗಳಿಗೆ ವಿದ್ಯಾರ್ಥಿ ವೇತನವನ್ನೇ ಅವಲಂಬಿಸಿಕೊಂಡು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.
ಮುಕ್ತಿ ನೀಡದ ‘ಮುಕ್ತ ಆಯ್ಕೆ’: ಪದವಿಯಲ್ಲಿಯೇ ವಿಷಯದ ‘ಮುಕ್ತ ಆಯ್ಕೆ’ಗೆ ಅವಕಾಶ ನೀಡಲಾಗಿದ್ದರೂ, ಆಯ್ಕೆಯನ್ನು ಪ್ರಾಧ್ಯಾಪಕರೇ ಮಾಡಿಕೊಡುತ್ತಿದ್ದಾರೆ ಎಂದು ಧಾರವಾಡದ ವಿದ್ಯಾರ್ಥಿಯೊಬ್ಬರು ದೂರಿದರು.
'ನನಗೆ ಮರಾಠಿಯ ಗಂಧಗಾಳಿ ಗೊತ್ತಿಲ್ಲ. ಹಿಂದಿಯೂ ಬರುವುದಿಲ್ಲ. ಮುಕ್ತ ಆಯ್ಕೆಯಲ್ಲಿ ಮರಾಠಿ ವಿಷಯಕ್ಕೆ ನನ್ನ ಹೆಸರನ್ನು ಸೇರಿಸಲಾಗಿದೆ' ಎಂದು ಅಳಲು ತೋಡಿಕೊಂಡರು.
ಏಕರೂಪ ವೇಳಾಪಟ್ಟಿ ಗೊಂದಲ: ರಾಜ್ಯದ ಎಲ್ಲ ವಿವಿಗಳಿಗೂ ಏಕರೂಪ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಇಲಾಖೆ, ಪಠ್ಯ ಹಾಗೂ ಪರೀಕ್ಷೆ ನಡುವೆ ಬೆರಳೆಣಿಕೆ ದಿನಗಳ ಅಂತರವನ್ನಿಟ್ಟು ಗೊಂದಲ ಮೂಡಿಸಿತ್ತು. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡುಧಾರವಾಡದ ಕ.ವಿ.ವಿ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ, ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ, ಹಂಪಿ ಕನ್ನಡ ವಿ.ವಿ, ಮಂಗಳೂರು ವಿ.ವಿ ಸೇರಿದಂತೆ ಹಲವು ವಿ.ವಿಗಳ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ), ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ ಆರ್ಗನೈಝೇಷನ್ (ಎಐಡಿಎಸ್ಒ) ಹಾಗೂ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ) ಪ್ರತಿಭಟನೆ ನಡೆಸುತ್ತ ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳು ಜೊತೆಗೂಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಹಾಗೂ ಸಚಿವರು ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಫಲಿತಾಂಶ ಪ್ರಕಟಕ್ಕೆ ವಿಳಂಬವಾಗಿದೆ ಎಂದು ಈಚೆಗೆ ಮಂಗಳೂರು ವಿ.ವಿಗೆಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು.ಈ ಕುರಿತು ಈಚೆಗೆ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಉಪನಾಯಕ ಯು.ಟಿ. ಖಾದರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಹತ್ತೇ ದಿನಗಳೊಳಗೆ ಮಂಗಳೂರು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಆಗಲಿದೆ ಎಂದಿದ್ದಾರೆ.
*
ಮೌಲ್ಯಮಾಪನ ಮುಗಿದಿದೆ. ಯುಯುಸಿಎಂಎಸ್‌ನಲ್ಲಿ ಹೆಚ್ಚುವರಿ(ಗ್ರೇಸ್) ಅಂಕ ನಮೂದಿಸುವ ಆಯ್ಕೆ ಅಪ್ಡೇಟ್ ಆಗದೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿದ ತಕ್ಷಣ ಫಲಿತಾಂಶ ಪ್ರಕಟಿಸಲಾಗುವುದು.
–ಪ್ರೊ.ಸಿ. ಕೃಷ್ಣಮೂರ್ತಿ, ಪರೀಕ್ಷಾಂಗ ಕುಲಸಚಿವ, ಕವಿವಿ
*
ವಿದ್ಯಾರ್ಥಿವೇತನವನ್ನು ನಂಬಿ ಬಂದ ಹಲವು ವಿದ್ಯಾರ್ಥಿಗಳು ಊರಿಗೆ ಮರಳಿದ್ದಾರೆ. ಕೆಲವರು ರಾತ್ರಿ ದುಡಿದು ಬೆಳಿಗ್ಗೆ ತರಗತಿ ಹಾಜರಾಗುವ ಉದ್ದೇಶದಿಂದ ಕೆಲಸ ಹುಡುಕುತ್ತಿದ್ದಾರೆ.
–ಮಹಾಂತೇಶ ಬೀಳೂರು, ಜಿಲ್ಲಾ ಸಮಿತಿ ಅಧ್ಯಕ್ಷ ಎಐಡಿಎಸ್ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.