ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 300 ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.
ಇಲ್ಲಿನ ಹೊಸೂರು ಬಳಿಯ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಶನಿವಾರ 15 ಹೊಸ ಬಿಆರ್‌ಟಿಎಸ್‌ಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಂಸ್ಥೆಯಲ್ಲಿ ಕೆಲವು ಹಳೆಯ ಬಸ್‌ಗಳನ್ನೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಇವುಗಳನ್ನು ಬದಲಾಯಿಸುವ ಪ್ರಸ್ತಾವ ಹಲವು ದಿನಗಳಿಂದಲೂ ಇತ್ತು. ಇದೀಗ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ನಾನ್ ಎಸಿ ಸ್ಲೀಪರ್ ಹಾಗೂ ಸಾಮಾನ್ಯ ಬಸ್‌ಗಳನ್ನು ಸಂಸ್ಥೆಯ ವ್ಯಾಪ್ತಿಯ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.
ಸಾರಿಗೆ ಸಂಸ್ಥೆ ಸಿಬ್ಬಂದಿಗೆ ವಸತಿ ಗೃಹ: ಸಾರಿಗೆ ಸಂಸ್ಥೆ ನೌಕರರು ನಗರಗಳಲ್ಲಿ ದುಬಾರಿ ಮನೆ ಬಾಡಿಗೆಯಿಂದಾಗಿ ತಮ್ಮ ಊರುಗಳಿಗೆ ಹೋಗಲು ವರ್ಗಾವಣೆ ಕೋರಿಕೆ ಸಲ್ಲಿಸುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಂಡಕ್ಟರ್, ಡ್ರೈವರ್ ಹಾಗೂ ಮೆಕಾನಿಕ್‌ಗಳಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ಕೆಲವು ವಸತಿ ಗೃಹಗಳ ನಿರ್ಮಾಣ ನಡೆಯಲಿದೆ ಎಂದು ತಮ್ಮಣ್ಣ ತಿಳಿಸಿದರು.
ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಸರ್ಕಾರಿ ಕಚೇರಿ: ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅದನ್ನು ಸರ್ಕಾರಿ ಕಚೇರಿಗಳಿಗೆ ಬಾಡಿಗೆ ನೀಡಲಾಗುವುದು. ಇದರಿಂದ ಸಂಸ್ಥೆಯ ವರಮಾನವೂ ಹೆಚ್ಚಲಿದೆ ಎಂದರು.
₹ 650 ಕೋಟಿ ನಷ್ಟ: ಪ್ರಸ್ತುತ ಬಿಎಂಟಿಸಿಯೂ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ₹ 650 ಕೋಟಿ ನಷ್ಟವನ್ನು ಎದುರಿಸುತ್ತಿವೆ. ವಾಣಿಜ್ಯ ಸಂಕೀರ್ಣ ನಿರ್ಮಿಸಿ ಬಾಡಿಗೆ ಕೊಡುವುದು ಹಾಗೂ ಸಂಸ್ಥೆಯಲ್ಲಿ ಮಿತವ್ಯಯ ಸೂತ್ರವನ್ನು ಪಾಲಿಸುವ ಮೂಲಕ ನಷ್ಟ ಸರಿದೂಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕರಾದ ಜಗದೀಶ ಶೆಟ್ಟರ್, ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್, ಡಿಜಿಎಂ ಬಸವರಾಜ ಕೇರಿ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಸಾರಿಗೆ ನಿಯಂತ್ರಕ ಅಶೋಕ ಪಾಟೀಲ ಇದ್ದರು.
ಬಸ್‌ನಲ್ಲಿ ಸಂಚರಿಸಿದ ಸಚಿವ ತಮ್ಮಣ್ಣ ಬಿಆರ್‌ಟಿಎಸ್ ಟರ್ಮಿನಲ್‌ನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
‘ಸರ್ಕಾರಿ ನೌಕರರೆಂದು ಪರಿಗಣಿಸಲಾಗದು’
‘ಸಾರಿಗೆ ಸಂಸ್ಥೆ ಮೊದಲೇ ನಷ್ಟದಲ್ಲಿರುವುದರಿಂದ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಹಳಷ್ಟು ಹೊರೆಯಾಗಲಿದೆ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 1.30 ಲಕ್ಷ ಸಾರಿಗೆ ಸಂಸ್ಥೆ ಸಿಬ್ಬಂದಿ ಇದ್ದಾರೆ. ಅಷ್ಟೂ ಜನರಿಗೆ ವೇತನ ಪರಿಷ್ಕರಣೆ ಹಾಗೂ ಇತರ ಭತ್ಯೆಗಳನ್ನು ನೀಡಲು ಆಗುವುದಿಲ್ಲ. ಆದರೆ, ಸಂಸ್ಥೆಗೆ ಕಾಯಕಲ್ಪ ನೀಡುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ ಎಂದರು.
ಬಿಆರ್‌ಟಿಎಸ್ ಸ್ವತಂತ್ರ ಕಂಪನಿಯಾಗಿ ಸಾರಿಗೆ ಸೇವೆ ನೀಡಲಿದೆ. ಅದನ್ನು ಸಾರಿಗೆ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವ ಇಲ್ಲ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.