ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ನಿಗಮ, ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಿದೆ. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದಾರೆ. ಧಾರವಾಡ ಜಿಲ್ಲೆಯಿಂದ ಯುವಕಾಂಗ್ರೆಸ್ ನಾಯಕ ವಿನೋದ ಅಸೂಟಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ ಸನದಿ ಅವರ ಹೆಸರು ಕೇಳಿಬಂದಿದೆ.
ಎರಡನೇ ಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು ಕಾರ್ಯಕರ್ತರಲ್ಲಿ ಆಶಾಭಾವನೆ ಮೂಡಿಸಿದೆ. ಹಲವು ವರ್ಷ ಪಕ್ಷದಲ್ಲಿ ದುಡಿದಿದ್ದಕ್ಕೆ ತಮ್ಮನ್ನು ಗುರುತಿಸಿ ಜವಾಬ್ದಾರಿ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧ ಎಂಬ ಸಂದೇಶ ಹೈಕಮಾಂಡ್‌ಗೆ ಕಾರ್ಯಕರ್ತರು ರವಾನಿಸಿದ್ದಾರೆ.
ಅಸೂಟಿ ಕೊಡುಗೆ:
ನವಲಗುಂದ ಕ್ಷೇತ್ರದ ನಾಯಕ ವಿನೋದ ಅಸೂಟಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಅವರು 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪೈಪೋಟಿ ನೀಡಿದ್ದರು. ಕಳೆದ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ನಿಗಮ– ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಪಕ್ಷದ ಹೈಕಮಾಂಡ್ ಭರವಸೆ ನೀಡಿ, ಹಿಂದಕ್ಕೆ ಸರಿಸಿತ್ತು.
ಶಾಕೀರ ಸನದಿ:
2008ರ ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮೂರು ಸಲ ಸಂಸದರಾಗಿದ್ದ ಪ್ರೊ.ಐ.ಜಿ. ಸನದಿ ಅವರ ಪುತ್ರ ಶಾಕೀರ ಸನದಿ ಕೂಡ ನಿಗಮ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದ ಪ್ರಮುಖ ಮುಸ್ಲಿಂ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೂ ನಿಗಮ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪಕ್ಷಕ್ಕಾಗಿ ಹಲವು ವರ್ಷ ದುಡಿದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿ ಸ್ಥಾನ ನೀಡಿದರೆ ಒಳ್ಳೆಯದು. ಒಂದೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ
– ವಿನೋದ ಅಸೂಟಿ
ನಿಗಮ ಮಂಡಳಿಗೆ ನೇಮಕ ಮಾಡಿದರೆ ಪಕ್ಷದ ಕಾರ್ಯಕರ್ತರಿಗೆ ಪ್ರೇರಣೆ ನೀಡಿದಂತೆ ಆಗುತ್ತದೆ. ಪಕ್ಷಕ್ಕಾಗಿ ಇನ್ನಷ್ಟು ದುಡಿಯಲು ಉತ್ಸಾಹ ಬರುತ್ತದೆ. –
ಶಾಕೀರ ಸನದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.