ಹುಬ್ಬಳ್ಳಿ: ‘ನಿಜಗುಣ ಶಿವಯೋಗಿಯವರು ಅಪರೂಪದ ಮಹಾತ್ಮರು. ತತ್ವಪದಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ಮಂಗಳವಾರಪೇಟೆ ರುದ್ರಾಕ್ಷಿಮಠದಲ್ಲಿ ನಡೆಯುತ್ತಿರುವ ನಿಜಗುಣ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.
‘ನಿಜಗುಣ ಶಿವಯೋಗಿ ಅವರು ವಿವೇಕ ಚಿಂತಾಮಣಿ, ಅನುಭವ ಸಾರ ಸೇರಿದಂತೆ 7 ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಈ ಮೂಲಕ ತಮ್ಮ ಜ್ಞಾನವನ್ನು ಇಡೀ ನಾಡಿಗೆ ಪಸರಿಸಿದರು’ ಎಂದರು.
‘ಸಮಾಜದಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ನಮ್ಮ ಗುರು ಶಿಷ್ಯ ಪರಂಪರೆ ಬೆಳೆಯಬೇಕು. ಮಠಾಧೀಶರ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆ ಕೆಲಸ. ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ವಿದೇಶಿಗರು ನಮ್ಮ ಸಂಸ್ಕೃತಿ, ಯೋಗ ಅನುಕರಣೆ ಮಾಡುತ್ತಿದ್ದಾರೆ. ಸನಾತನ ಹಿಂದೂ ಧರ್ಮದ ಕುರಿತು ನಾವು ಹೆಚ್ಚು ಜಾಗೃತರಾಗಬೇಕು’ ಎಂದರು.
ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು ಪ್ರವಚನ ನೀಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಣಕವಾಡ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಜೆ.ಅಬ್ಬಾಸ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಜಡೇಶಿದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸದಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸಾವುಕಾರ, ಮಹಾಂತೇಶ ಗಿರಿಮಠ ಸೇರಿದಂತೆ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.