ADVERTISEMENT

ಹುಬ್ಬಳ್ಳಿ | ಮೂಲಸೌಕರ್ಯ ವಂಚಿತ ಹೆಬಸೂರು

ಕೆಸರುಮಯ ರಸ್ತೆಗಳು, ಸಂಚಾರ ಸಂಕಷ್ಟ, ಶೌಚಾಲಯ ಕೊರತೆ

ಸತೀಶ ಬಿ.
Published 24 ಜುಲೈ 2024, 5:35 IST
Last Updated 24 ಜುಲೈ 2024, 5:35 IST
ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಕೆಸರುಮಯವಾದ ರಸ್ತೆ
ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಕೆಸರುಮಯವಾದ ರಸ್ತೆ   

ಹುಬ್ಬಳ್ಳಿ: ಅಲ್ಪ ಮಳೆಗೂ ಕೆಸರು ಗದ್ದೆಯಂತಾಗುವ ರಸ್ತೆಗಳು, ಅವೈಜ್ಞಾನಿಕ ಚರಂಡಿ ಕಾಮಗಾರಿ, ಸಾರ್ವಜನಿಕ ಶೌಚಾಲಯಗಳ ಕೊರತೆ...

–ಇದು ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದ ದುಸ್ಥಿತಿ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಗ್ರಾಮದಲ್ಲಿ 16 ಜನ ಸದಸ್ಯರಿದ್ದಾರೆ. 1200 ಮನೆಗಳಿವೆ. ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ವಂಚಿತವಾಗಿದ್ದು, ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲ  ಕೆಸರುಮಯವಾಗಿವೆ. ಗ್ರಾಮದ ಐದು ಮತ್ತು ಆರನೇ ವಾರ್ಡ್‌ನ ರಸ್ತೆಗಳು ಸೇರಿದಂತೆ ವಿವಿಧ ಓಣಿಗಳು ರಸ್ತೆಗಳು ಹದಗೆಟ್ಟಿದ್ದು, ವೃದ್ಧರು, ಮಕ್ಕಳು, ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಗ್ರಾಮದ ಕೆಲವು ಓಣಿಗಳಲ್ಲಿ ಮಾತ್ರ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಉಳಿದ ಓಣಿಗಳಿಗೆ ಸಿ.ಸಿ ರಸ್ತೆ ಭಾಗ್ಯ ಇಲ್ಲ ಎಂಬುದು ಗ್ರಾಮಸ್ಥರ ದೂರು.

ಸಾರ್ವಜನಿಕ ಶೌಚಾಲಯಗಳಿಲ್ಲ: ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಹೀಗಾಗಿ ಜನರು ಬಯಲಲ್ಲೇ ಶೌಚಕ್ಕೆ ಹೋಗಬೇಕಾಗಿದೆ. ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದ್ದು, ಡೆಂಗಿ ಸೇರಿದಂತೆ ಇನ್ನಿತರ ಕಾಯಿಲೆಗಳ ಭೀತಿ ಕಾಡುತ್ತಿದೆ ಎನ್ನುತ್ತಾರೆ ಹೂಗಾರ ಓಣಿಯ ಮಹಿಳೆಯರು.

‘ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಅಥವಾ ಸಂಜೆ ಕತ್ತಲಾದ ನಂತರ ಶೌಚಕ್ಕೆ ಹೋಗಬೇಕು. ಇದರಿಂದ ಹಾವು, ಚೇಳುಗಳು ಕಚ್ಚುವ ಭೀತಿ ಇರುತ್ತದೆ. ಗ್ರಾಮದಲ್ಲಿ ಬೀದಿ ದೀಪದ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲ’ ಎಂದು ಗ್ರಾಮದ ನಾಗರತ್ನಮ್ಮ ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಒಂದೇ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಅದು ಸುಸ್ಥಿತಿಯಲ್ಲಿದ್ದುದಕ್ಕಿಂತ ಹಾಳಾಗಿದ್ದೇ ಹೆಚ್ಚು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎನ್ನುತ್ತಾರೆ ಯುವಕರು.

ಜಲಜೀವನ್‌ ಮಿಷನ್‌ ಯೋಜನೆ ಅಡಿ ಕೆಲವೆಡೆ ಪೈಪ್‌ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಮನೆ ಮನೆಗೆ ನೀರು ಗಗನಕುಸುಮವಾಗಿದೆ ಎಂಬುದು ಅವರ ದೂರು. 

ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರೂ ಸ್ಪಂದಿಸಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದರೆ ಗ್ರಾಮ ಪಂಚಾಯಿತಿ ಅಧಿಕಾರಿ ಹಾರಿಕೆಯ ಉತ್ತರ ಕೊಡುತ್ತಾರೆ ಎಂದು ಗ್ರಾಮದ ಯುವ ಮುಖಂಡ, ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಕುರುಬರ ದೂರಿದರು.

ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಇದ್ದು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸಮರ್ಪಕ ರಸ್ತೆ ಇಲ್ಲ. ಶಾಲಾ ಆವರಣದಲ್ಲಿ ಹುಲ್ಲು ಬೆಳೆದಿದ್ದು, ಮಳೆ ಬಂದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಜನರ  ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯ.

ಹೆಬಸೂರು ಗ್ರಾಮದ ಸಮಸ್ಯೆಗಳ ಕುರಿತು ತಾ.ಪಂ ಇಒ ಅವರಿಂದ ಮಾಹಿತಿ ಪಡೆಯಲಾಗುವುದು. ಅಗತ್ಯ ಬಿದ್ದರೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು
ಪ್ರಕಾಶ ನಾಶಿ, ತಹಶೀಲ್ದಾರ್, ಹುಬ್ಬಳ್ಳಿ ಗ್ರಾಮೀಣ
ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು
ಸುಧಾ ಗಾಣದಾಳ, ಪಿಡಿಒ
ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಹದಗೆಟ್ಟ ರಸ್ತೆಯನ್ನು ಗ್ರಾಮಸ್ಥರು ತೋರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.