ADVERTISEMENT

ವಿಸ್ಮಯ ಇಲ್ಲದೆ ಒಳನೋಟ ದಕ್ಕಲು ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2018, 12:24 IST
Last Updated 15 ಆಗಸ್ಟ್ 2018, 12:24 IST
ಧಾರವಾಡದ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ವಿವೇಕ ಶಾನಭಾಗ ಐದು ಕೃತಿಗಳನ್ನು ಬಿಡುಗಡೆಗೊಳಿಸಿದರು
ಧಾರವಾಡದ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ವಿವೇಕ ಶಾನಭಾಗ ಐದು ಕೃತಿಗಳನ್ನು ಬಿಡುಗಡೆಗೊಳಿಸಿದರು   

ಧಾರವಾಡ: ‘ವಿಸ್ಮಯದ ದೃಷ್ಟಿಕೋನ ಇಲ್ಲದಿದ್ದರೆ ವಿಮರ್ಶೆಗೆ ಒಳನೋಟಗಳು ದಕ್ಕಲು ಸಾಧ್ಯವಿಲ್ಲ’ ಎಂದು ಲೇಖಕ ವಿವೇಕ ಶಾನಭಾಗ್‌ ಅಭಿಪ್ರಾಯಪಟ್ಟರು.

ಮನೋಹರ ಗ್ರಂಥಮಾಲೆ ಬುಧವಾರ ಆಯೋಜಿಸಿದ್ದ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ, ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಯಾವುದೇ ಒಂದು ಕೃತಿ ವಿಮರ್ಶೆಗೆ ಒಳಪಡುವಾಗ ವಿಮರ್ಶಕ ಮೊದಲು ಅದನ್ನು ಅನುಭವಿಸಬೇಕು. ನಂತರ ಆ ಕುರಿತು ಅಭಿವ್ಯಕ್ತಗೊಳಿಸಬೇಕು. ಯಾವುದೇ ಒಂದು ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ಸಿದ್ಧ ಮಾದರಿಗಳಿದ್ದರೆ, ಅಲ್ಲಿ ಕಥೆ, ಕವನ ಸೇರಿದಂತೆ ಹೊಸದರ ಸೃಷ್ಟಿ ಸರಳ ಮತ್ತು ಸವಾಲು ಹೌದು. ಏಕೆಂದರೆ ಸಿದ್ಧ ಮಾದರಿಗಳಂತೆ ಬರೆದರೆ ಅದು ಅನುಕರಣೆಯಾಗುತ್ತದೆ. ಅದನ್ನು ಮೀರಬೇಕಾದರೆ ಸಿದ್ಧ ಮಾದರಿಗಳನ್ನು ಮುರಿದು ಹೊಸ ಮಾದರಿಗಳನ್ನು ಸೃಷ್ಟಿಸುವ ಸವಾಲು ಲೇಖಕನದಾಗಿರುತ್ತದೆ’ ಎಂದರು.

‘ಕನ್ನಡ ಸಾಹಿತ್ಯ ಲೋಕದಲ್ಲಿ ಯಾವುದೇ ಒಂದು ಉತ್ತಮ ಕೃತಿ ಪ್ರಕಟವಾಗದೆ ಉಳಿದಿಲ್ಲ. ಪ್ರಕಟವಾದ ಪ್ರತಿ ಕೃತಿಯೂ ಓದುಗರನ್ನು ತನ್ನತ್ತ ಸೆಳೆದುಕೊಂಡಿದೆ. ಓದಿಸಿಕೊಂಡಿದೆ. ಅಂಥ ಕೃತಿಗಳ ಕುರಿತು ಧನಾತ್ಮಕ ಚರ್ಚೆಗಳು ನಡೆದಿವೆ. ಅಂಥದೊಂದು ಸೌಹಾರ್ದ ವಾತಾವರಣ ಕನ್ನಡ ಸಾಹಿತ್ಯ ಲೋಕದಲ್ಲಿದೆ’ ಎಂದರು.

ADVERTISEMENT

‘ಧಾರವಾಡಕ್ಕೆ ಒಂದು ಕ್ಷೇತ್ರ ಮಹಿಮೆ ಇದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಸಾಹಿತ್ಯದ ವಾತಾವರಣ ಮತ್ತು ಮನೋಹರ ಗ್ರಂಥಮಾಲೆಯಂಥ ಪ್ರಕಟಣಾ ಸಂಸ್ಥೆಗಳು. ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯೊಂದಿಗೆ ಮನೋಹರ ಗ್ರಂಥಮಾಲೆ ಜತೆಯಾಗಿ ನಡೆದಿದೆ. ಸಾಹಿತ್ಯ ಲೋಕದ ಪ್ರತಿಯೊಂದು ಪಲ್ಲಟಗಳಿಗೂ ಗ್ರಂಥಮಾಲೆ ಸ್ಪಂದಿಸುತ್ತ ಬಂದಿದೆ. ಸಾಕಷ್ಟು ಲೇಖಕರ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ’ ಎಂದು ಶಾನಭಾಗ್ ಹೇಳಿದರು.

ಕಥೆಗಾರ ಭಾಸ್ಕರ ಹೆಗಡೆ ಮಾತನಾಡಿ, ‘ಇಂಗ್ಲಿಷ್ ಭಾಷೆಯಲ್ಲಿ ಎರಡು, ಮೂರು ವರ್ಷಗಳಿಗೊಮ್ಮೆ ಹೊಸ ನುಡಿಗಟ್ಟುಗಳು ಪದಕೋಶ ಸೇರಿ, ಬಳಕೆಗೆ ಬರುತ್ತವೆ. ಕನ್ನಡದ ಸಂದರ್ಭದಲ್ಲಿ ಹೀಗಾಗುತ್ತಿಲ್ಲ. ಕನ್ನಡದಲ್ಲಿ ಹೊಸ ಪದಪುಂಜಗಳ ಬಳಕೆ ಕುರಿತು ಚಿಂತನೆ ನಡೆಯಬೇಕಿದೆ’ ಎಂದರು.

ಕೃತಿಕಾರರಾದ ಎಸ್.ಆರ್.ವಿಜಯಶಂಕರ, ಜಿ.ಪಿ.ಬಸವರಾಜು, ಹ.ವೆಂ.ಕಾಖಂಡಕಿ, ಡಾ.ರಮಾಕಾಂತ ಜೋಶಿ, ಡಾ.ಚೆನ್ನವೀರ ಕಣವಿ ಇದ್ದರು. ಕಾರ್ಯಕ್ರಮದಲ್ಲಿ ಜಿ.ಪಿ.ಬಸವರಾಜು ಅವರು ಬರೆದ ‘ಕಾಡಿನ ದಾರಿ’, ಎಸ್.ಆರ್.ವಿಜಯಶಂಕರ ಅವರ ‘ಅಕ್ಷರ ಚಿತ್ರಗಳು’, ಡಾ. ಗಿರೀಶ ಕಾರ್ನಾಡ ಅವರ ‘ರಾಕ್ಷಸ-ತಂಗಡಿ’, ಡಾ. ಗುರುಲಿಂಗ ಕಾಪಸೆ ಅನುವಾದಿಸಿದ ‘ಒಂದು ಪುಟದ ಕಥೆ’ ಹಾಗೂ ಭಾಸ್ಕರ ಹೆಗಡೆ ಅವರ ’ಮೀಸೆ ಮಾವ’ ಕೃತಿಗಳು ಬಿಡುಗಡೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.