ಹುಬ್ಬಳ್ಳಿ: ಅವಳಿ ನಗರದ ಬಿಆರ್‌ಟಿಎಸ್ ನಿಲ್ದಾಣಗಳಲ್ಲಿ ಶೌಚಾಲಯ ಇಲ್ಲದ ಕಾರಣ ಬಿಆರ್‌ಟಿಎಸ್ ಟಿಕೆಟ್ ವಿತರಣಾ ಸಿಬ್ಬಂದಿ ಅಲ್ಲದೇ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 32 ಬಿಆರ್‌ಟಿಎಸ್ ಬಸ್ ನಿಲ್ದಾಣಗಳಿವೆ. ಪ್ರತಿ ದಿನ ಸಾವಿರಾರು ಜನ ಪ್ರಯಾಣಿಸುತ್ತಾರೆ. ಸೌಲಭ್ಯದ ಕೊರತೆಯಿಂದ ಮಹಿಳೆಯರು, ವೃದ್ಧರಿಗೆ ಸಮಸ್ಯೆಯಾಗಿದೆ.
ಬಿಆರ್‌ಟಿಎಸ್ ನಿಲ್ದಾಣಗಳಲ್ಲಿ ಶೌಚಾಲಯ ಇಲ್ಲದಿರುವುದು ಒಂದೆಡೆಯಾದರೆ, ಅದರ ಸುತ್ತಮುತ್ತ ಸಹ ಸಾರ್ವಜನಿಕ ಶೌಚಾಲಯಗಳಿಲ್ಲ. ಶೌಚಾಲಯ ನಿರ್ಮಿಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.
‘ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳಿಂದ ಪ್ರತಿದಿನ ಹುಬ್ಬಳ್ಳಿ–ಧಾರವಾಡ ಮಧ್ಯೆ ಸಂಚರಿಸುತ್ತಿದ್ದೇನೆ. ಯಾವ ನಿಲ್ದಾಣಗಳಲ್ಲೂ ಶೌಚಾಲಯ ಇಲ್ಲ. ಕೆಲವೊಮ್ಮೆ ಬಸ್‌ಗಳು ಬರುವುದು ವಿಳಂಬವಾಗುತ್ತವೆ. ಜೊತೆಗೆ ಮಕ್ಕಳೂ ಇರುತ್ತಾರೆ. ಅಂಥ ಸಂದರ್ಭದಲ್ಲಿ ತುಂಬಾ ತೊಂದರೆಯಾಗುತ್ತದೆ’ ಎಂದು ಉದ್ಯೋಗಿ ಚೈತ್ರಾ ಎಸ್. ಹೇಳಿದರು.
‘ಕಚೇರಿ ಅವಧಿ ಮುಗಿದ ನಂತರ ಕೆಲವೊಮ್ಮೆ ಮನೆಗೆ ಹೋಗುವ ಧಾವಂತದಲ್ಲಿ ಮಲ, ಮೂತ್ರ ವಿಸರ್ಜನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಬಸ್ ನಿಲ್ದಾಣದಿಂದ ಆಟೊ ಇಲ್ಲವೆ, ನಡೆದುಕೊಂಡು ಮನೆ ತಲುಪಬೇಕು. ನಿಲ್ದಾಣದಲ್ಲಿ ಶೌಚಾಲಯ ಇದ್ದರೆ ಅನೂಕೂಲವಾಗುತ್ತದೆ’ ಎಂದರು.
ಸಿಬ್ಬಂದಿಗೂ ತೊಂದರೆ:
ಬಿಆರ್‌ಟಿಎಸ್ ನಿಲ್ದಾಣದ ಟಿಕೆಟ್ ಕೌಂಟರ್‌ಗಳಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಶೌಚಾಲಯ ಇಲ್ಲದ ಕಾರಣಕ್ಕೆ ಅವರಿಗೂ ತೊಂದರೆಯಾಗುತ್ತಿದೆ.
‘ಪ್ರತಿ ದಿನ ಪಾಳಿಯಲ್ಲಿ 8 ಗಂಟೆ ಕೆಲಸ ಮಾಡುತ್ತೇವೆ. ಬೆಳಿಗ್ಗೆ ಮನೆಯಲ್ಲಿ ನಿತ್ಯ ಕರ್ಮ ಮುಗಿಸಿಕೊಂಡು ಬಂದ ನಂತರ ಮನೆಗೆ ಹೋಗಿಯೇ ಶೌಚ, ಮೂತ್ರ ವಿಸರ್ಜನೆಗೆ ಹೋಗಬೇಕು’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
‘ತುರ್ತು ಸಂದರ್ಭದಲ್ಲಿ ಇನ್ನೊಂದು ಕೌಂಟರ್ ಸಿಬ್ಬಂದಿಗೆ ನೋಡಿಕೊಳ್ಳಲು ಹೇಳಿ ಸಮೀಪದ ಆಸ್ಪತ್ರೆ, ಕಾಂಪ್ಲೆಕ್ಸ್‌ಗಳಲ್ಲಿನ ಶೌಚಾಲಯಗಳಿಗೆ ಹೋಗುತ್ತೇವೆ. ಕೌಂಟರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಸಂಸ್ಥೆಯ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದರು.
ಸಂಚಾರಿ ಶೌಚಾಲಯ:
ಅವಳಿ ನಗರದಲ್ಲಿ ಸಂಚಾರಿ ಶೌಚಾಲಯ ಸಂಚರಿಸುತ್ತದೆ. ಇದು ನಿಲ್ದಾಣದ ಬಳಿ ಬಂದಾಗ ಶೌಚ, ಮೂತ್ರ ವಿಸರ್ಜನೆಗೆ ಹೋಗಬೇಕು. ಅದು ಬೇರೆ ಕಡೆ ಇದ್ದರೆ ಅಲ್ಲಿವರೆಗೂ ತಡೆದುಕೊಳ್ಳಬೇಕು ಎಂದು ಸಿಬ್ಬಂದಿಯೊಬ್ಬರು ಹೇಳಿದರು.
ನಗರದ ಹಲವೆಡೆ ಇರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯಾಗುತ್ತಿಲ್ಲ. ಬಿಆರ್‌ಟಿಎಸ್ ನಿಲ್ದಾಣಗಳಲ್ಲಿ ಶೌಚಾಲಯ ನಿರ್ಮಿಸಿ ಉಚಿತ ಬಳಕೆಗೆ ನೀಡಬೇಕು–ಸಿದ್ರಾಮಪ್ಪ ಬಡಿಗೇರಪ್ರಯಾಣಿಕ, ಧಾರವಾಡ
ಆರ್‌ಟಿಎಸ್ ಯೋಜನೆಯಿಂದ ಹುಬ್ಬಳ್ಳಿ–ಧಾರವಾಡ ನಡುವೆ ಸಂಚರಿಸಲು ಅನುಕೂಲವಾಗಿದೆ. ಶೌಚಾಲಯ ವ್ಯವಸ್ಥೆ ಕಲ್ಪಿಸಿದರೆ ಪ್ರಯಾಣಿಕರಿಗೆ ತೊಂದರೆ ತಪ್ಪಿಸಬಹುದು–ಸರಸ್ವತಿ ಬದಾಮಿಕರ,ಅರಿಹಂತನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.